ಕನ್ನಡಪ್ರಭ ವಾರ್ತೆ ಬೆಂಗಳೂರು
ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾಸಗಿ ಕ್ರೀಡಾ ಕ್ಲಬ್‌ನ ಈಜು ತರಬೇತುದಾರ ಸೇರಿದಂತೆ ಇಬ್ಬರನ್ನು ಸಿಸಿಬಿ ಹಾಗೂ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರತ್ಯೇಕವಾಗಿ ಸೆರೆ ಹಿಡಿದಿದ್ದಾರೆ.ಆಫ್ರಿಕಾ ಮೂಲದ ಅಮದೌ ಸಿಡಿಬೆ ಬೌಬಕರ್ ಹಾಗೂ ಕೇರಳದ ರಿಜ್ವಾನ್ ರಜಾಕ್ ಬಂಧಿತರಾಗಿದ್ದು, ಆರೋಪಿಗಳಿಂದ 5.5 ಕೇಜಿ ಗಾಂಜಾ ಹಾಗೂ 24 ಗ್ರಾಂ ಕೊಕೇನ್ ಸೇರಿದಂತೆ ₹21.75 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕತ್ರಿಗುಪ್ಪೆ ಹಾಗೂ ಬೇಗೂರು ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಈ ಪೆಡ್ಲರ್‌ಗಳು ಬಂಧಿತರಾಗಿದ್ದಾರೆ.
ಬಿಇಗೆ ಟಾಟಾ ಹೇಳಿ ಪೆಡ್ಲರ್ ಆದ:ಎಂಟು ವರ್ಷಗಳ ಹಿಂದೆ ಎಂಜಿನಿಯರಿಂಗ್ ಓದುವ ಸಲುವಾಗಿ ನಗರಕ್ಕೆ ಬಂದಿದ್ದ ರಿಜ್ವಾನ್, ಬಳಿಕ ನಾಗವಾರ ಸಮೀಪ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆದರೆ ಅಂತಿಮ ವರ್ಷದಲ್ಲಿ ಬಿಇ ಅರ್ಧಕ್ಕೆ ಮೊಟಕುಗೊಳಿಸಿದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದು ಈಗ ಜೈಲು ಸೇರಿದ್ದಾನೆ. ಓದನ್ನು ಅರ್ಧಕ್ಕೆ ನಿಲ್ಲಿಸಿದ ಬಳಿಕೆ ಆತ ಬೇಗೂರು ಹತ್ತಿರದ ಕ್ರೀಡಾ ಕ್ಲಬ್‌ನಲ್ಲಿ ಈಜು ತರಬೇತುದಾರನಾಗಿ ಸೇರಿಕೊಂಡಿದ್ದ. ತನ್ನೂರಿನಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಆತ ಮಾರುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈತನ ಬಗ್ಗೆ ಖಚಿತ ಮಾಹಿತಿ ಪಡೆದ ದಾಳಿ ನಡೆಸಿ ಗಾಂಜಾ ಸಮೇತ ರಿಜ್ವಾನ್‌ನನ್ನು ಸಿಸಿಬಿ ಡ್ರಗ್ಸ್ ನಿಗ್ರಹ ದಳದ ಎಸಿಪಿ ಪರಮೇಶ್ ಹಾಗೂ ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ್ ನೇತೃತ್ವದ ತಂಡ ಬಂಧಿಸಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.ವಿದೇಶಿ ಪ್ರಜೆ ಖಾಕಿ ಬಲೆಗೆ:ಕತ್ರಿಗುಪ್ಪೆ ರಾಮರಾವ್ ಲೇಔಟ್‌ನ ಆಟದ ಮೈದಾನದ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಆಫ್ರಿಕಾ ಮೂಲದ ಅಮದೌ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2014ರಲ್ಲಿ ಶೈಕ್ಷಣಿಕ ವೀಸಾದಡಿ ನಗರಕ್ಕೆ ಬಂದಿದ್ದ ಆತ, ಥಣಿಸಂದ್ರ ಸಮೀಪದ ಹೆಗಡೆ ನಗರದಲ್ಲಿ ನೆಲೆಸಿದ್ದ. ವಿದೇಶದ ಪೆಡ್ಲರ್‌ಗಳ ಮೂಲಕ ಕೊಕೇನ್ ಖರೀದಿಸಿ ಆತ ನಗರದಲ್ಲಿ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ಆರ್.ಹೇಮಂತ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
- - -₹22 ಲಕ್ಷದ ಇ-ಸಿಗರೇಟ್, ಹುಕ್ಕಾ ಪ್ಯಾಕೇಜ್ ಜಪ್ತಿ; ಸೆರೆಕನ್ನಡಪ್ರಭ ವಾರ್ತೆ ಬೆಂಗಳೂರುಅಕ್ರಮ ಇ-ಸಿಗರೆಟ್ ದಂಧೆ ಮೇಲೆ ದಾಳಿ ನಡೆಸಿ ₹21 ಲಕ್ಷ ಮೌಲ್ಯದ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಿದೆ.ಬಾಗಲಗುಂಟೆಯ ಸಲ್ಮಾನ್ ಬಂಧಿತನಾಗಿದ್ದು, ಆರೋಪಿಯಿಂದ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 240 ವಿದೇಶಿ ಸಿಗರೆಟ್ ಪ್ಯಾಕ್‌ಗಳು, 291 ಇ-ಸಿಗರೆಟ್ ಹಾಗೂ 360 ಹುಕ್ಕಾ ಪ್ಯಾಕೇಟ್‌ಗಳನ್ನು ಜಪ್ತಿ ಮಾಡಲಾಗಿದೆ. ಬಾಗಲಗುಂಟೆ ಸಮೀಪ ಮನೆಯೊಂದರಲ್ಲಿ ಕಾನೂನುಬಾಹಿರವಾಗಿ ಇ ಸಿಗರೆಟ್, ವಿದೇಶಿ ಸಿಗರೆಟ್ ಹಾಗೂ ಹುಕ್ಕಾ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದೆ. ಈ ವೇಳೆ ಕೆಲಸಗಾರ ಸಲ್ಮಾನ್ ಸಿಕ್ಕಿಬಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಮಾಲಿಕರು ಸೇರಿದಂತೆ ಮೂವರ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.