ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಬಂಧಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿದ್ದ ವ್ಯಕ್ತಿ ಹಾಗೂ ಸುಪಾರಿ ಪಡೆದು ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಹಾಗೂ ಮೂವರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸುಪಾರಿ ನೀಡಿದ್ದ ಕೋಲಾರದ ಮಾಲೂರಿನ ಹೇಮಂತ್ ರೆಡ್ಡಿ (20), ಸುಪಾರಿ ಪಡೆದಿದ್ದ ಗಗನ್ (19), ಬಾಲಾಜಿ (20) ಬಂಧಿತರು. ಇನ್ನು ಮೂವರು ಅಪ್ರಾಪ್ತರನ್ನು ಬಾಲ ನ್ಯಾಯಮಂಡಳಿಗೆ ಎದುರು ಹಾಜರುಪಡಿಸಿ ಬಾಲಮಂದಿರಕ್ಕೆ ಬಿಡಲಾಗಿದೆ. ಆರೋಪಿಗಳಿಂದ ಟಾಟಾ ಸುಮೋ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.15ರಂದು ರಾತ್ರಿ 12 ಗಂಟೆಗೆ ಪಿಎಸ್ಐ ಶಿವಣ್ಣ ಅವರು ಗಸ್ತಿನಲ್ಲಿದ್ದ ವೇಳೆ ಗಂಟಿಗಾನಹಳ್ಳಿ ಬಳಿಯ ಜಿಸಿಬಿಸಿ ಅಪಾರ್ಟ್‌ಮೆಂಟ್ ಬಳಿಯ ರಸ್ತೆ ಪಕ್ಕದ ಕತ್ತಲು ಪ್ರದೇಶದಲ್ಲಿ ಮಂಕಿ ಕ್ಯಾಪ್ ಧರಿಸಿದ ಐವರು ಅಪರಿಚಿತರು ಟಾಟಾ ಸುಮೋ ವಾಹನ ನಿಲ್ಲಿಸಿಕೊಂಡು ಕುಳಿತಿರುವುದು ಕಂಡು ಬಂದಿದೆ. ಈ ವೇಳೆ ಅವರನ್ನು ಸುತ್ತುವರೆದು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಹಾರೋಹಳ್ಳಿಯ ಸಾಯಿಗ್ರೀನ್ ಪಾರ್ಕ್ ಲೇಔಟ್ ನಿವಾಸಿ ಕಿಶೋರ್ ಎಂಬಾತನ ಕೊಲೆಗೆ ಹೇಮಂತ್ ರೆಡ್ಡಿಯಿಂದ ಸುಪಾರಿ ಪಡೆದಿದ್ದು, ಕೊಲೆಗೆ ಸಂಚು ರೂಪಿಸಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ವಿವರ:
ಪ್ರಕರಣದ ಪ್ರಮುಖ ಆರೋಪಿ ಹೇಮಂತ್ ರೆಡ್ಡಿಯ ಸಂಬಂಧಿ ಮಹಿಳೆ ಮತ್ತು ಕಿಶೋರ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವ ವಿಚಾರ ಹೇಮಂತ್ ರೆಡ್ಡಿಗೆ ಗೊತ್ತಾಗಿದೆ. ಹೀಗಾಗಿ ಕಿಶೋರ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದ ಹೇಮಂತ್ ರೆಡ್ಡಿ ತನಗೆ ಪರಿಚಯವಿರುವ ಆರೋಪಿಗಳಾದ ಗಗನ್, ಬಾಲಾಜಿ ಹಾಗೂ ಇತರರನ್ನು ಭೇಟಿಯಾಗಿ ವಿಚಾರ ತಿಳಿಸಿದ್ದಾನೆ. ಕಿಶೋರ್‌ನ ಕೊಲೆಗೆ ₹3 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ.ಕೊಲೆಗೆ ಹೊಂಚು ಹಾಕಿದ್ದಾಗ ಖಾಕಿ ಬಲೆಗೆ:ಆರೋಪಿಗಳು ಏ.15ರಂದು ರಾತ್ರಿ 12 ಗಂಟೆಗೆ ಕಿಶೋರ್ ಗಂಟಿಗಾನಹಳ್ಳಿ ಮಾರ್ಗವಾಗಿ ಹಾರೋಹಳ್ಳಿಯ ಮನೆಗೆ ತೆರಳುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಕಾಯುವಾಗ ಅದೇ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಪಿಎಸ್‌ಐ ಶಿವಣ್ಣ ಅವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಮೂಲಕ ಕಿಶೋರ್ ಕೊಲೆಗೆ ರೂಪಿಸಿದ್ದ ಸಂಚು ವಿಫಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.