ಬೆಂಗಳೂರು : ಅಪಾರ್ಟ್‌ಮೆಂಟ್‌ವೊಂದರ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಗಂಡು ಮಗು ಸುಟ್ಟು ಕರಲಾಗಿರುವ ಹೃದಯ ವಿದ್ರಾವಕ ಘಟನೆ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನೇಪಾಳದ ಮೂಲದ ಪೂರನ್ ಖಂಡಕ್ ಮತ್ತು ಲಕ್ಷ್ಮಿ ದಂಪತಿ ಪುತ್ರ ಅನೂಪ್ (4) ಮೃತ ಮಗು. ಆರ್.ಟಿ.ನಗರದ ಸುಲ್ತಾನ್‌ಪಾಳ್ಯದ ರಿಯಾನ್ ವುಡ್ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯ ಕೊಠಡಿಯಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ.
ಘಟನೆ ವಿವರ:
ಕಳೆದ ಮೂರೂವರೆ ವರ್ಷಗಳಿಂದ ರಿಯಾನ್ ವುಡ್ ಅಪಾರ್ಟ್‌ಮೆಂಟ್‌ನಲ್ಲಿ ಪೂರನ್ ಖಂಡಕ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದರೆ, ಪತ್ನಿ ಲಕ್ಷ್ಮಿ ಮನೆಗೆಲಸ ಮಾಡುತ್ತಿದ್ದರು. ದಂಪತಿಗೆ 4 ವರ್ಷದ ಅನೂಪ್ ಮಗುವಿತ್ತು. ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಈ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕನೇ ಮಹಡಿಯ ಮೇಲೆ ಶೀಟ್ ಹಾಕಿ ಒಂದು ಕೊಠಡಿ ನಿರ್ಮಿಸಿ ಪೂರನ್ ದಂಪತಿಗೆ ಉಳಿದುಕೊಳ್ಳಲು ನೀಡಲಾಗಿತ್ತು.
ಎಂದಿನಂತೆ ಭಾನುವಾರವೂ ಪೂರನ್ ಅಪಾರ್ಟ್‌ಮೆಂಟ್ ಎದುರು ಸೆಕ್ಯೂರಿ ಗಾರ್ಡ್ ಕೆಲಸ ಮಾಡುತ್ತಿದ್ದ. ಪತ್ನಿ ಲಕ್ಷ್ಮಿ ಮಗುವನ್ನು ಆ ಕೊಠಡಿಯಲ್ಲಿ ಮಲಗಿಸಿ, ಬಾಗಿಲು ಹಾಕಿಕೊಂಡು ಮನೆಗೆಲಸಕ್ಕೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಕೊಠಡಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಪೂರನ್ ಓಡಿಹೋಗಿ ನೋಡಿದಾಗ ಕೊಠಡಿ ಒಳಗೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ಬಾಗಿಲು ತೆರೆದು ನೋಡಿದಾಗ ಮಗು ಬೆಂಕಿಯಿಂದ ಸುಟ್ಟಿ ಮೃತಪಟ್ಟಿತ್ತು.
ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಈ ವೇಳೆ ನಿದ್ದೆ ಮಾಡುತ್ತಿದ್ದ ಮಗುವಿಗೂ ಬೆಂಕಿ ಹೊತ್ತಿಕೊಂಡು ಮೃತಪಟ್ಟಿದೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.