ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಸಹಜೀವನ ನಡೆಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ಮಹಿಳಾ ಟೆಕಿ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೊಮ್ಮನಹಳ್ಳಿಯ ಹೊಸಪಾಳ್ಯ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಉತ್ತರ ಪ್ರದೇಶ ಮೂಲದ ಆದಿತ್ಯನಾಥ್ ಸಿಂಗ್ (26) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ವಿವರ:
ಉತ್ತರ ಭಾರತ ಮೂಲದ ಸಂತ್ರಸ್ತೆ ಕೆಲ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿ ಆದಿತ್ಯ ಸಿಂಗ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಈ ನಡುವೆ 2022ರ ಜುಲೈನಲ್ಲಿ ಜಿಮ್‌ವೊಂದರಲ್ಲಿ ಸಂತ್ರಸ್ತೆ ಮತ್ತು ಆದಿತ್ಯ ಸಿಂಗ್ ಪರಸ್ಪರ ಪರಿಚಿತರಾಗಿ ಬಳಿಕ ಸ್ನೇಹ ಬೆಳೆದು ಪ್ರೀತಿಸಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಯು ಮದುವೆ ಆಗುವುದಾಗಿ ನಂಬಿಸಿದ್ದಾನೆ. 2022ರ ನವೆಂಬರ್‌ನಿಂದ ಇಬ್ಬರೂ ಒಂದೇ ಮನೆಯಲ್ಲಿ ಸಹಜೀವನ ನಡೆಸಲು ಪ್ರಾರಂಭಿಸಿದ್ದಾರೆ. ನಂತರ ಆರೋಪಿಯು ಸಂತ್ರಸ್ತೆ ಜತೆಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. 2023ರ ಜುಲೈ ಬಳಿಕ ಆರೋಪಿಯು ವಿನಾಕಾರಣ ಸಂತ್ರಸ್ತೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಸಂತ್ರಸ್ತೆ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಿಕ್ಕಿಲ್ಲ.
2023ರ ಆಗಸ್ಟ್‌ನಲ್ಲಿ ಸಂತ್ರಸ್ತೆಗೆ ಸಿಕ್ಕಿದ ಆರೋಪಿ ಆದಿತ್ಯ ಸಿಂಗ್, ಕ್ಷುಲ್ಲಕ ಕಾರಣಗಳಿಗೆ ಸಂತ್ರಸ್ತೆ ಜತೆಗೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕ ಹಲ್ಲೆ ಮಾಡಿದ್ದಾನೆ. ಕೆಲ ತಿಂಗಳ ಬಳಿಕ ಮತ್ತೆ ಸಂತ್ರಸ್ತೆಯನ್ನು ಸಂಪರ್ಕಿಸಿರುವ ಆರೋಪಿಯು ಹಿಂದಿನ ಘಟನೆಗಳನ್ನು ಮರೆಯುವಂತೆ ಹೇಳಿದ್ದಾನೆ. ಮದುವೆ ಆಗುವುದಾಗಿ ಮತ್ತೆ ನಂಬಿಸಿ ಸಂತ್ರಸ್ತೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚೆಗೆ ಸಂತ್ರಸ್ತೆ ಮದುವೆ ಆಗುವಂತೆ ಒತ್ತಾಯಿಸಿದಾಗ ಮತ್ತೆ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ. ಇದನ್ನು ಪ್ರಶ್ನಿಸಿದ ಸಂತ್ರಸ್ತೆಯ ಮೇಲೆ ಹಲ್ಲೆಗೈದು ಚಾಕುವಿನಿಂದ ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂತ್ರಸ್ತೆಗೆ ಈ ಹಿಂದೆ ಬೇರೆ ವ್ಯಕ್ತಿಯ ಜತೆಗೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಾರೆ. ಈ ವಿಚಾರ ಪ್ರಿಯಕರ ಆದಿತ್ಯ ಸಿಂಗ್‌ಗೆ ಗೊತ್ತಾಗಿ ಸಂತ್ರಸ್ತೆಯಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.