ಅಶ್ಲೀಲ ವಿಡಿಯೋಗಳ ರೀತಿಯ ಸೆಕ್ಸ್‌ ಬೇಕೆಂದು ಪತಿ ಕಿರುಕುಳ

KannadaprabhaNewsNetwork |  
Published : Apr 16, 2024, 02:01 AM ISTUpdated : Apr 16, 2024, 05:16 AM IST
ಇಮೇಜ್‌ | Kannada Prabha

ಸಾರಾಂಶ

ಪಾರ್ನ್‌ ವಿಡಿಯೋಗಳ ಮಾದರಿಯಲ್ಲಿ ತನ್ನೊಂದಿಗೆ ಸೆಕ್ಸ್‌ ಮಾಡಬೇಕು ಎಂದು ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ನಿಯೇ ಪತಿಯ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

 ಬೆಂಗಳೂರು : ಅಶ್ಲೀಲ ವಿಡಿಯೋ ಮಾದರಿಯಲ್ಲಿ ಸೆಕ್ಸ್‌ ಮಾಡುವಂತೆ ಪತಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಕಾಲ್‌ ಗರ್ಲ್‌ಗಳನ್ನು ಮನೆಗೆ ಕರೆಸಿಕೊಂಡು ನನ್ನ ಎದುರು ಅಸಭ್ಯವಾಗಿ ವರ್ತಿಸುತ್ತಾನೆ. ಅತ್ತೆ-ಮಾವ ಎಲ್ಲರೂ ಸೇರಿಕೊಂಡು ನನ್ನ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿ ನೊಂದ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರ 7ನೇ ಹಂತದ ನಿವಾಸಿಗಳಾದ ಪತಿ ವಿಘ್ನೇಶ್ವರನ್‌(36), ಅತ್ತೆ ವಿಜಯಲಕ್ಷ್ಮೀ(60), ಮಾವ ಕಲೈ ಸೇಲ್ವನ್‌(63), ನಾದಿನಿ ಪ್ರಿಯದರ್ಶಿನಿ(30) ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಸಂತ್ರಸ್ತೆಗೆ ಈ ಹಿಂದೆ ಬೇರೆ ವ್ಯಕ್ತಿಯ ಜತೆಗೆ ಮದುವೆಯಾಗಿತ್ತು. ಆದರೆ, ಆ ಮದುವೆ ಇಷ್ಟವಾಗದೆ ಪತಿಯನ್ನು ತೊರೆದು ಹೈದರಾಬಾದ್‌ಗೆ ತೆರಳಿ ನೆಲೆಸಿದ್ದರು. ವೃತ್ತಿಯಲ್ಲಿ ಕಾಸ್ಮಟಾಲೋಜಿಸ್ಟ್‌ ಆಗಿರುವ ಸಂತ್ರಸ್ತೆಗೆ ಕೆಲ ವರ್ಷಗಳ ಹಿಂದೆ ಚೆನ್ನೈ ಮೂಲದ ವಿಘ್ನೇಶ್ಚರನ್‌ ಪರಿಚಯವಾಗಿ ಬಳಿಕ ಸ್ನೇಹವಾಗಿ ಪರಸ್ಪರ ಪ್ರೀತಿಸಿದ್ದಾರೆ. ಈ ವೇಳೆ ವಿಘ್ನೇಶ್ವರನ್‌ ಮುಂದೆ ನಿಂತು ಸಂತ್ರಸ್ತೆಯು ಮೊದಲ ಪತಿ ಜತೆಗೆ ಚರ್ಚಿಸಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆಯಲು ಸಹಾಯ ಮಾಡಿದ್ದಾನೆ. ಬಳಿಕ ಇಬ್ಬರ ಕುಟುಂಬಗಳ ಒಪ್ಪಿಗೆ ಪಡೆದು ಸಂತ್ರಸ್ತೆ ಹಾಗೂ ವಿಘ್ನೇಶ್ವರನ್ 2018ರಲ್ಲಿ ತಿರುಪತಿಯಲ್ಲಿ ಮದುವೆಯಾಗಿದ್ದಾರೆ.

ಆರಂಭದಲ್ಲಿ ವಿಘ್ನೇಶ್ವರನ್‌ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ. ವಿಘ್ನೇಶ್ವರನ್‌ ಪೋಷಕರು ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಬಳಿಕ ವಿನಾಕಾರಣ ಮನೆಯಲ್ಲಿ ಜಗಳ ತೆಗೆದು ಕಿರುಕುಳ ನೀಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ವಿಘ್ನೇಶ್ವರನ್‌ಗೆ ಚಾಡಿ ಹೇಳುತ್ತಿದ್ದರು. ಈ ನಡುವೆ ಸಂತ್ರಸ್ತೆಗೆ ಒಂದು ಗುಂಡು ಮಗುವಾಗಿದೆ. ಆಗಲೂ ಆ ಮಗು ಮತ್ತು ಸಂತ್ರಸ್ತೆಯನ್ನು ಸರಿಯಾಗಿ ನೋಡಿಕೊಂಡಿಲ್ಲ. ಮೊದಲ ಪತಿಯ ವಿಚಾರ ಪ್ರಸ್ತಾಪಿಸಿ ನಿಂದಿಸುವುದು, ಹೀಯಾಳಿಸುತ್ತಿದ್ದರು. ನಾದಿನಿ ಪ್ರಿಯಾದರ್ಶಿನಿ ಮಗು ಮತ್ತು ಸಂತ್ರಸ್ತೆಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪತಿ ವಿಘ್ನೇಶ್ವರನ್‌ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಆ ಮಾದರಿಯಲ್ಲಿ ಸೆಕ್ಸ್‌ ಮಾಡುವಂತೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿನಾಕಾರಣ ಜಗಳ ತೆಗೆದು ಹಲವು ಬಾರಿ ಹಲ್ಲೆ ಮಾಡಿದ್ದಾನೆ. 2023ರ ಮೇನಲ್ಲಿ ಹೈದರಾಬಾದ್‌ನಿಂದ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತಂದಿದ್ದಾನೆ. ಇಲ್ಲಿಯೂ ಆತ ಸರಿಯಾಗಿ ನೋಡಿಕೊಳ್ಳದೆ ಕಿರಕುಳ ಮುಂದುವರೆಸಿದ್ದಾನೆ. ಮನೆಗೆ ಕಾಲ್‌ ಗರ್ಲ್‌ಗಳನ್ನು ಕರೆಸಿಕೊಂಡು ಸಂತ್ರಸ್ತೆಯ ಎದುರು ಅಸಭ್ಯವಾಗಿ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.ಈ ಹಿಂದೆಯೂ ಠಾಣೆಗೆ ದೂರು

ಈ ಸಂಬಂಧ ಹಿಂದೆ ಪೊಲೀಸರಿಗೆ ದೂರು ನೀಡಿದ್ದಾಗ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದ. ಇದೀಗ ಮತ್ತೆ ನನಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅತ್ತೆ, ಮಾವ, ನಾದಿನಿಯೂ ಸಹ ಹಿಂಸೆ ನೀಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳಿಗೆ ಜಾಮೀನು
ಪುತ್ರನ ಸಮಯ ಪ್ರಜ್ಞೆಯಿಂದ 6 ತಾಸು ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ಅಕ್ರಮದಿಂದ ಪಾರು