ಕೊರಿಯರ್‌ ಹೆಸರಿನಲ್ಲಿ ಬೆದರಿಸಿ ಸಾಲ ಮಾಡಿಸಿಕೊಂಡು ಮೋಸ

KannadaprabhaNewsNetwork | Updated : Apr 16 2024, 05:12 AM IST

ಸಾರಾಂಶ

ನಿಮ್ಮ ಹೆಸರಿನ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ವರ್ಗ ಆಗಿದೆ ಎಂದು ಬೆದರಿಸಿ ಟೆಕಿಯ ಬ್ಯಾಂಕ್‌ ಖಾತೆ ವಿವರ ಪಡೆದ ಕಿರಾತಕನೋರ್ವ ಬ್ಯಾಂಕ್‌ನಲ್ಲಿ ಸಾಲ ಪಡೆದು ವಂಚಿಸಿದ್ದಾರನೆ.

 ಬೆಂಗಳೂರು :  ಸೈಬರ್‌ ವಂಚಕರು ಫೆಡಕ್ಸ್‌ ಕೊರಿಯರ್‌ ಹೆಸರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಬ್ಯಾಂಕ್‌ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗುತ್ತಿರುವುದಾಗಿ ಹೆದರಿಸಿ ಅವರ ಬ್ಯಾಂಕ್‌ ಖಾತೆಯ ಮಾಹಿತಿ ಪಡೆದು ₹1.97 ಲಕ್ಷವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಬಂಡೇಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಡ್ಲು ಮುಖ್ಯರಸ್ತೆಯ ವಿನಾಯಕನಗರ ನಿವಾಸಿ ಆಕಾಶ್‌ ರಾಜ್‌(32) ವಂಚನೆಗೆ ಒಳಗಾದವರು. ಏ.10ರಂದು ಅಪರಿಚಿತರು ಆಕಾಶ್‌ ರಾಜ್‌ಗೆ ಕರೆ ಮಾಡಿ ತಾವು ಫೆಡೆಕ್ಸ್‌ ಕೊರಿಯರ್‌ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ.

‘ನಿಮ್ಮ ಆಧಾರ್‌ ಸಂಖ್ಯೆ ಬಳಸಿ ಮುಂಬೈನಿಂದ ಇರಾನ್‌ಗೆ ಅಕ್ರಮವಾಗಿ 5 ಕೆ.ಜಿ.ಬಟ್ಟೆ, 1 ಲ್ಯಾಪ್‌ಟಾಪ್‌, ಪಾಸ್‌ಪೋರ್ಟ್‌, ಕ್ರೆಡಿಟ್‌ ಕಾರ್ಡ್‌, 50 ಶೀಟ್‌ ಎಲ್‌ಎಸ್‌ಡಿ ಮಾದಕ ಮಾತ್ರೆಗಳನ್ನು ಸಾಗಿಸಲಾಗುತ್ತಿದೆ. ಅಂತೆಯೇ ನಿಮ್ಮ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದೆ’ ಎಂದು ಹೇಳಿ ಆಕಾಶ್‌ ರಾಜ್‌ ಅವರ ಬ್ಯಾಂಕ್‌ ಖಾತೆ ಮಾಹಿತಿ ಪಡೆದುಕೊಂಡಿದ್ದಾನೆ.

ಬಳಿಕ ಆಕಾಶ್‌ ರಾಜ್‌ಗೆ ತಿಳಿಯದಂತೆ ಅವರ ಐಸಿಐಸಿಐ ಖಾತೆಯಿಂದ ₹1.97 ಲಕ್ಷ ಲೋನ್‌ ಮಾಡಿಸಿ ಬಳಿಕ ಆ ಹಣವನ್ನು ಆಕಾಶ್‌ ರಾಜ್‌ ಅವರ ಕೊಟಾಕ್‌ ಮಹೀಂದ್ರ ಮತ್ತು ಇಂಡಸ್‌ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಬಳಿಕ ತಮ್ಮ ಖಾತೆಗೆ ಆ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಲೋನ್‌ ಸಂಬಂಧ ಆಕಾಶ್‌ ರಾಜ್‌ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶ ಬಂದ ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಬಳಿಕ ಆಕಾಶ್‌ ರಾಜ್‌ ಬಂಡೇಪಾಳ್ಯ ಪೊಲೀಸ್‌ ಠಾಣೆಗೆ ಬಂದು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೈಬರ್‌ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article