ಫೇಸ್ಬುಕ್‌ ಪ್ರೀತಿಗೆ ದುರಂತ ಅಂತ್ಯ: ಪತ್ನಿ, ಅತ್ತೆ-ಮಾವ ಮೂವರ ಬರ್ಬರ ಹತ್ಯೆ -ಯಾದಗಿರಿಯ ಸೈದಾಪುರದಲ್ಲಿ ಕೃತ್ಯ

KannadaprabhaNewsNetwork | Updated : Jul 19 2024, 05:08 AM IST

ಸಾರಾಂಶ

ಫೇಸ್‌ಬುಕ್‌ನಲ್ಲಿ ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಅತ್ತೆ-ಮಾವ ಮೂವರನ್ನು ಬರ್ಬರವಾಗಿ ಕೊಂದು ಹಾಕಿದ ಪೈಶಾಚಿಕ ಕೃತ್ಯ ಯಾದಗಿರಿ ಸಮೀಪದ ಸೈದಾಪುರದಲ್ಲಿ ನಡೆದಿದೆ.

ಯಾದಗಿರಿ/ದಾವಣಗೆರೆ: ಫೇಸ್‌ಬುಕ್‌ನಲ್ಲಿ ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಅತ್ತೆ-ಮಾವ ಮೂವರನ್ನು ಬರ್ಬರವಾಗಿ ಕೊಂದು ಹಾಕಿದ ಪೈಶಾಚಿಕ ಕೃತ್ಯ ಯಾದಗಿರಿ ಸಮೀಪದ ಸೈದಾಪುರದಲ್ಲಿ ನಡೆದಿದೆ.

ದಾವಣಗೆರೆ ನಿವಾಸಿ ಬಸವರಾಜಪ್ಪ ಅಲಿಯಾಸ್ ಬಸಪ್ಪ (61), ಪತ್ನಿ ಕವಿತಾ (57) ಹಾಗೂ ಪುತ್ರಿ ಅನ್ನಪೂರ್ಣ (30) ಹತ್ಯೆಯಾದ ದುರ್ದೈವಿಗಳು. ಮೃತ ಅನ್ನಪೂರ್ಣ ಅವರ ಪತಿ ನವೀನ್‌ ಹಾಗೂ ಆತನ ತಂದೆ ದೇವಿಂದ್ರಪ್ಪ (ನಿವೃತ್ತ ಶಿಕ್ಷಕ) ಅವರನ್ನು ಸೈದಾಪುರ ಪೊಲೀಸರು ಗುರುವಾರ ಬಂಧಿಸಿದ್ದು, ಒಂದೂವರೆ ವರ್ಷದ ಮಗುವನ್ನು ರಕ್ಷಿಸಿದ್ದಾರೆ.

ಸೈದಾಪುರದ ನವೀನ್‌ ಹಾಗೂ ದಾವಣಗೆರೆಯ ಅನ್ನಪೂರ್ಣ ಫೇಸ್‌ಬುಕ್‌ ಮೂಲಕ ಪ್ರೀತಿಸಿ ಮದುವೆಯಾಗಿದ್ದರು. ಕಳೆದ 1 ವರ್ಷದಿಂದ ದಂಪತಿ ನಡುವೆ ಬಿರುಕು ಮೂಡಿತ್ತು. ಮತ್ತೊಂದು ಮದುವೆಯಾಗಲು ಮುಂದಾಗಿದ್ದ ನವೀನ್ ವಿಚ್ಛೇದನ ನೀಡುವಂತೆ ಅನ್ನಪೂರ್ಣಗೆ ಒತ್ತಾಯಿಸಿದ್ದ. ಈ ಬಗ್ಗೆ ರಾಜಿ ಪಂಚಾಯಿತಿ ಮಾಡಲು ಮೂವರನ್ನು ಸೋಮವಾರ ನವೀನ್ ಕುಟುಂಬದವರು ಕರೆಸಿಕೊಂಡಿದ್ದರು. ಆದರೆ, ಅವರನ್ನು ಮುನುಗಲ್‌ನ ಮನೆಗೆ ಕರೆದುಕೊಂಡು ಹೋಗದ ಸೈದಾಪುರದ ಲಾಡ್ಜ್‌ನಲ್ಲಿ ವಸತಿ ಮಾಡಿಸಲಾಗಿತ್ತು.

ಪ್ರತ್ಯೇಕ ಸ್ಥಳದಲ್ಲಿ ಕೊಲೆ: ವಡಗೇರಾ ತಾಲೂಕಿನ ಗೋನಾಲ ಹತ್ತಿರ ಮಂಗಳವಾರ ಮಾವ ಬಸವರಾಜನನ್ನು ರಾಡ್ ಹಾಗೂ ಚಾಕುವಿನಿಂದ ಇರಿದು ಕೊಲೆಗೈದು, ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ದ ನವೀನ್, ನಂತರ ಪತ್ನಿ ಹಾಗೂ ಅತ್ತೆ ಕವಿತಾ ಅವರನ್ನು ಜೋಳದಡಗಿ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಗಾಬರಿಯಲ್ಲಿ ಮಗುವನ್ನು ಮನೆಯಲ್ಲಿಯೇ ಬಿಟ್ಟು ನವೀನ್‌ ಬೆಳಗಾವಿಗೆ ತೆರಳಿದ್ದಾನೆ. ಇತ್ತ, ಬಸವರಾಜಪ್ಪ ಫೋನ್ ಸ್ವೀಕರಿಸಿದ್ದಕ್ಕೆ ದಾವಣಗೆರೆಯಲ್ಲಿರುವ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ನವೀನನ್ನು ಪತ್ತೆ ಹಚ್ಚಿ ವಿಚಾಸಿದಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಸೈದಾಪುರ ಹಾಗೂ ವಡಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Share this article