ಬೆಂಗಳೂರು : ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಚಾಲಕನೋರ್ವ ಕಾರು ಚಲಾಯಿಸಿ ಗುದ್ದಿ ಮಹಿಳೆ ಸಾವು

KannadaprabhaNewsNetwork | Updated : Nov 04 2024, 04:44 AM IST

ಸಾರಾಂಶ

ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಚಾಲಕನೋರ್ವ ಕಾರು ಚಲಾಯಿಸಿದ್ದಾನೆ. ಕಾರು ಗುದ್ದಿದ್ದರಿಂದ ಮಹಿಳೆ ಸಾವನ್ನಪ್ಪಿದ ಘಟನೆ ಕೆಂಗೇರಿಯಲ್ಲಿ ನಡೆದಿದೆ.

  ಬೆಂಗಳೂರು : ಪಾನಮತ್ತನಾಗಿ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದಾರುಣ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಸವೇಶ್ವರನಗರ ನಿವಾಸಿ ಸಂಧ್ಯಾ (30) ಮೃತ ದುರ್ದೈವಿ. ಶನಿವಾರ ಸಂಜೆ ಸುಮಾರು 7 ಗಂಟೆಗೆ ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿ ಬಿಎಂಟಿಸಿ ಟಿಟಿಎಂಸಿ ಬಳಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕಾರು ಚಾಲಕ ನಾಗರಭಾವಿ ನಿವಾಸಿ ಧನುಷ್‌ (20) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಸಂಧ್ಯಾ ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಕೆಂಗೇರಿ ಬಿಎಂಟಿಸಿ ಟಿಟಿಎಂಸಿ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ರಾಜರಾಜೇಶ್ವರಿನಗರದ ಕಡೆಯಿಂದ ವೇಗವಾಗಿ ಬಂದ ಕಾರು, ಏಕಾಏಕಿ ಸಂಧ್ಯಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯರ ರಭಸಕ್ಕೆ ಸಂಧ್ಯಾ ಅವರ ಎರಡು ಕಾಲುಗಳು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಸಂಧ್ಯಾ ಮೃತಪಟ್ಟಿದ್ದಾರೆ.

ಡ್ರಂಕ್‌ ಆ್ಯಂಡ್‌ ಡ್ರೈವ್‌: ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಅಪಘಾತ ಎಸೆದ ಕಾರನ್ನು ಜಪ್ತಿ ಮಾಡಿ ಚಾಲಕ ಧನುಷ್‌ನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ಖಚಿತವಾಗಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುದ್ದೋಡಿದ ಕಾರು: ಬೈಕ್‌ ಸ್ಥಳದಲ್ಲೇ ಸವಾರ ಸಾವುಕನ್ನಡಪ್ರಭ ವಾರ್ತೆ ಬೆಂಗಳೂರುಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜಪೇಟೆ ನಿವಾಸಿ ಮಂಜುನಾಥ(26) ಮೃತ ದುರ್ದೈವಿ. ಶನಿವಾರ ರಾತ್ರಿ ಸುಮಾರು 10ಕ್ಕೆ ಬಸವನಗುಡಿಯ ಎಂ.ವಿ.ಸೀತಾರಾಮಯ್ಯ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವೃತ್ತಿಯಲ್ಲಿ ಫುಡ್‌ ಡೆಲಿವರಿ ಬಾಯ್‌ ಆಗಿದ್ದ ಮಂಜುನಾಥ ಪತ್ನಿ ಕೆ.ಜಿ.ನಗರದಲ್ಲಿ ಇದ್ದರು. 

ಆಕೆಯನ್ನು ಕರೆದುಕೊಂಡು ಬರಲು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎಂ.ವಿ.ಸೀತಾರಾಮಯ್ಯ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಮಂಜುನಾಥ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಸಾರ್ವಜನಿಕರು ಗಾಯಾಳು ಮಂಜುನಾಥನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಗಂಭೀರ ಪೆಟ್ಟು ಬಿದ್ದ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಕಾರಿನ ನೋಂದಣಿ ಸಂಖ್ಯೆ ಪತ್ತೆಯಾಗಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article