ಪೆಟ್ರೋಲ್‌ ಹಾಕಿ ಪ್ರಿಯಕರನ ಕೊಂದ ಮಹಿಳೆ!

KannadaprabhaNewsNetwork |  
Published : Dec 22, 2023, 01:30 AM IST
Crime | Kannada Prabha

ಸಾರಾಂಶ

ಪೇದೆ, ಮಹಿಳಾ ಹೋಂಗಾರ್ಡ್ ಪ್ರೇಮ ಕಲಹ ಕೊಲೆಯಲ್ಲಿ ಅಂತ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೇಮ ಕಲಹದ ಹಿನ್ನೆಲೆಯಲ್ಲಿ ಮಹಿಳಾ ಹೋಂ ಗಾರ್ಡ್‌ ತನ್ನ ಪ್ರಿಯಕರ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತ್ಯಾಗರಾಜನಗರದ ನಿವಾಸಿ ಸಂಜಯ್ (30) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಹೋಂ ಗಾರ್ಡ್ ರಾಣಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಅಷ್ಟಲಕ್ಷ್ಮಿ ಲೇಔಟ್‌ನಲ್ಲಿರುವ ರಾಣಿ ಮನೆಗೆ ಸಂಜಯ್ ತೆರಳಿದ್ದ ವೇಳೆ ಇಬ್ಬರ ನಡುವೆ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಂಜಯ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರಾಣಿ ಕೊಲೆಗೆ ಯತ್ನಿಸಿದ್ದಾಳೆ. ಆಗ ಆತನ ಚೀರಾಟ ಕೇಳಿ ಕೊನೆಗೆ ಸಂಜಯ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಗಲಾಟೆ ವಿವರ: 2018ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಹಾಸನ ಜಿಲ್ಲೆ ಚನ್ನರಾಯಣಪಟ್ಟಣ ತಾಲೂಕಿನ ಸಂಜಯ್‌, ಬಸವನುಗುಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ. ಮೂರು ತಿಂಗಳ ಹಿಂದೆ ವಿಶೇಷ ಕರ್ತವ್ಯದ ಮೇರೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಸಂಜಯ ನಿಯೋಜನೆಗೊಂಡಿದ್ದ. ಬಸವನಗುಡಿ ಠಾಣೆಯಲ್ಲಿ ಸೇವೆ ಸಲ್ಲಿಸುವಾಗ ಆತನಿಗೆ ಅದೇ ಠಾಣೆಯಲ್ಲಿ ಹೋಂ ಗಾರ್ಡ್ ಆಗಿದ್ದ ರಾಣಿ ಪರಿಚಯ ಆಗಿದೆ. ಬಳಿಕ ಇಬ್ಬರಲ್ಲಿ ಆಪ್ತತೆ ಬೆಳೆದಿದೆ. ಮಂಡ್ಯ ಜಿಲ್ಲೆಯ ರಾಣಿ ವಿವಾಹವಾಗಿದ್ದು, ಅಷ್ಟಲಕ್ಷ್ಮಿ ಲೇಔಟ್‌ನಲ್ಲಿ ಪತಿ ಹಾಗೂ ಮಕ್ಕಳ ಜತೆ ಆಕೆ ನೆಲೆಸಿದ್ದಳು.

ಬೇರೊಬ್ಬನ ಜೊತೆ ಸಲುಗೆ: ಡಿ.6ರಂದು ಸಂಜೆ 6 ಗಂಟೆಗೆ ರಾಣಿ ಆಹ್ವಾನದ ಮೇರೆಗೆ ಆಕೆಯ ಮನೆಗೆ ಸಂಜಯ್ ತೆರಳಿದ್ದು, ಇಬ್ಬರು ಖಾಸಗಿ ಕ್ಷಣ ಕಳೆದಿದ್ದರು. ಆ ವೇಳೆ ರಾಣಿ ಮೊಬೈಲ್‌ಗೆ ಚೇತನ್‌ ಹೆಸರಿನ ವ್ಯಕ್ತಿಯಿಂದ ಬಂದಿರುವ ಕರೆ ಬಗ್ಗೆ ಸಂಜಯ್ ಪ್ರಶ್ನಿಸಿದಾಗ ಆತ ನನ್ನ ಪರಿಚಯದವನು ಎಂದಿದ್ದಳು. ಬಳಿಕ ರಾಣಿ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ಆ ವ್ಯಕ್ತಿ ಜತೆ ಸಹ ರಾಣಿ ಸಲುಗೆಯಿಂದ ಸಂಭಾಷಣೆ ನಡೆಸಿರುವುದು ಗೊತ್ತಾಗಿದೆ. ಇದಕ್ಕೆ ಸಂಜಯ್‌ ಆಕ್ಷೇಪಿಸಿದಾಗ ಇಬ್ಬರ ಮಧ್ಯೆ ಜೋರಾದ ಜಗಳವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ತಾನೇ ಪೆಟ್ರೋಲ್ ತಂದುಕೊಟ್ಟ ಸಂಜಯ್‌:

‘ನನ್ನನ್ನು ಪ್ರಶ್ನಿಸಿದರೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ’ ಎಂದು ಸಂಜಯ್‌ಗೆ ರಾಣಿ ಬೆದರಿಸಿದ್ದಳು. ಆಗ ಸಿಟ್ಟಿಗೆದ್ದ ಸಂಜಯ್‌, ಮನೆ ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ತೆರಳಿ 1 ಲೀಟರ್ ಪೆಟ್ರೋಲ್ ಖರೀದಿಸಿ ಮನೆ ಮರಳಿದ್ದ. ಬಳಿಕ ‘ನನ್ನನ್ನೇ ಸುಟ್ಟು ಹಾಕುತ್ತೀಯಾ. ಹಾಕು ನೋಡುವೆ’ ಎಂದಿದ್ದಾನೆ. ಈ ಹಂತದಲ್ಲಿ ಪೆಟ್ರೋಲ್‌ ತೆಗೆದುಕೊಂಡು ಸಂಜಯ್ ಮೇಲೆ ಸುರಿದು ಆಕೆ ಬೆಂಕಿ ಕಡ್ಡಿ ಗೀರಿದ್ದಾಳೆ. ಆಗ ಬೆಂಕಿಯಿಂದಾಗಿ ಚೀರಾಡತೊಡಗಿದಾಗ ಸಂಜಯ್ ಮೇಲೆ ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದ್ದಾಳೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಆತ ಕೊನೆಯುಸಿರೆಳೆದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.ಸುಳ್ಳು ದೂರು ಕೊಡಿಸಿದ್ದ ರಾಣಿ!:

ಘಟನೆ ಸಂಬಂಧ ಅಡುಗೆ ಮಾಡುವಾಗ ಸ್ಟೌವ್ ಸಿಡಿದು ಬೆಂಕಿ ಹತ್ತಿಕೊಂಡಿತು. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಮೃತ ಸಂಜಯ್‌ನಿಂದ ರಾಣಿ ಸುಳ್ಳು ದೂರು ಕೊಡಿಸಿದ್ದಳು. ಆದರೆ ಮೃತ ಸಂಜಯ್ ಪೋಷಕರು ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಸತ್ಯ ಸಂಗತಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಕಿಯಿಂದ ಸುಟ್ಟು ಗಾಯವಾಗಿದ್ದ ಸಂಜಯ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರಾಣಿ ಕರೆತಂದು ದಾಖಲಿಸಿದ್ದಳು. ಆಗ ಆಸ್ಪತ್ರೆ ಸಿಬ್ಬಂದಿ, ವಿವಿ ಪುರ ಠಾಣೆ ಪೊಲೀಸರಿಗೆ ಕಾನ್‌ಸ್ಟೇಬಲ್ ಸಂಜಯ್ ಎಂಬಾತ ಸುಟ್ಟುಗಾಯಗೊಂಡು ದಾಖಲಾಗಿರುವುದಾಗಿ ಮೆಮೋ ಕಳುಹಿಸಿದ್ದರು. ಈ ಮಾಹಿತಿ ಮೇರೆಗೆ ಆಸ್ಪತ್ರೆಗೆ ತೆರಳಿದ ಪೊಲೀಸರಿಗೆ ‘ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸ್ಟೌವ್ ಸಿಡಿದು ಬೆಂಕಿ ಹೊತ್ತಿಕೊಂಡಿತು’ ಎಂದು ಸಂಜಯ್ ಹೇಳಿಕೆ ನೀಡಿದ್ದ. ಆ ವೇಳೆ ಆಸ್ಪತ್ರೆಯಲ್ಲೇ ಇದ್ದ ರಾಣಿ, ಸಂಜಯ್‌ನಿಂದ ಸುಳ್ಳು ಹೇಳಿಕೆ ಕೊಡಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎರಡು ಠಾಣೆಯಲ್ಲಿ ಎಫ್‌ಐಆರ್‌:

ಮೊದಲು ತನ್ನ ಮನೆಯಲ್ಲಿ ನಡೆದ ಘಟನೆ ಎಂದು ಸಂಜಯ್ ಹೇಳಿಕೆ ಆಧರಿಸಿ ಹನುಮಂತನಗರ ಠಾಣೆಯಲ್ಲಿ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಮತ್ತೆ ಆತನನ್ನು ವಿಚಾರಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟ. ಹೀಗಾಗಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರಾಣಿ ಮನೆ ಬರುವುದರಿಂದ ಪ್ರಕರಣವನ್ನು ಮುಂದಿನ ತನಿಖೆಗೆ ಆ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಣಿ ಪತಿ ಶಬರಿಮಲೆ ಯಾತ್ರೆ:

ಈ ಕೃತ್ಯ ನಡೆದಾಗ ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿ ಪತಿ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಪತಿ ಇಲ್ಲದ ವೇಳೆ ಪ್ರಿಯಕರ ಸಂಜಯ್‌ನನ್ನು ಆಕೆಗೆ ಮನೆಗೆ ಆಹ್ವಾನಿಸಿದ್ದಳು ಎನ್ನಲಾಗಿದೆ.

--

ಕಾನ್‌ಸ್ಟೇಬಲ್‌ ಸಂಜಯ್ ಸಾವು ಪ್ರಕರಣ ಸಂಬಂಧ ಭಿನ್ನವಾದ ಹೇಳಿಕೆಗಳು ವ್ಯಕ್ತವಾಗಿವೆ. ಹೀಗಾಗಿ ಪ್ರಕರಣ ಕುರಿತು ವಿಧಿ ವಿಜ್ಞಾನ ತಜ್ಞರ ನೆರವು ಪಡೆದು ವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ.

-ರಾಹುಲ್ ಕುಮಾರ್‌ ಶಹಾಪುರವಾಡ್‌, ಡಿಸಿಪಿ, ಬೆಂಗಳೂರು ದಕ್ಷಿಣ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು