ಕೃತಕ ಬುದ್ಧಿಮತ್ತೆ ಆಧಾರಿತ136 ಟ್ರಾಫಿಕ್‌ ಸಿಗ್ನಲ್‌ಗೆ ಒಪ್ಪಿಗೆ

KannadaprabhaNewsNetwork |  
Published : Dec 22, 2023, 01:30 AM IST
ಸಿಗ್ನಲ್‌ | Kannada Prabha

ಸಾರಾಂಶ

ಬೆಂಗಳೂರಿನ ಸಂಚಾರ ಸಿಗ್ನಲ್‌ಗಳ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆ ಮೂಲಕ ನಿವಾರಿಸಲು ನಗರ ವ್ಯಾಪ್ತಿಯ 136 ಸಂಚಾರಿ ಸಿಗ್ನಲ್‌ಗಳನ್ನು ಉನ್ನತೀಕರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಈಗಾಗಲೇ ನಗರದ 29 ಸಂಚಾರಿ ಸಿಗ್ನಲ್‌ಗಳಲ್ಲಿ ಈ ವ್ಯವಸ್ಥೆ ಇದೆ. ಇದರ ಜೊತೆಗೆ ಈಗ ಇನ್ನೂ 136 ಸಿಗ್ನಲ್‌ಗಳನ್ನು ಉನ್ನತೀಕರಿಸಿ ಅಡಾಪ್ಟಿವ್‌ ಸಂಚಾರ ವ್ಯವಸ್ಥೆ ನಿಯಂತ್ರಣವನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರು ನಗರ ಸಂಚಾರಿ ವಿಭಾಗದ ಪೊಲೀಸ್‌ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈಗಿರುವ ಸಂಚಾರಿ ಸಿಗ್ನಲ್‌ ವ್ಯವಸ್ಥೆಯಲ್ಲಿ ವಾಹನಗಳು ಇರಲಿ, ಇಲ್ಲದಿರಲಿ ಪ್ರತಿ ಮಾರ್ಗಕ್ಕೂ ನಿಗದಿತ ಸಮಯದ ಗ್ರೀನ್‌ ಸಿಗ್ನಲ್‌ ಮತ್ತು ರೆಡ್‌ ಸಿಗ್ನಲ್‌ ವ್ಯವಸ್ಥೆ ಇರುತ್ತದೆ. ಆದರೆ, ಹೊಸ ಅಡಾಪ್ಟಿವ್‌ ಸಂಚಾರ ವ್ಯವಸ್ಥೆ ಅಳವಡಿಕೆಯಿಂದ ಸಂಚಾರಿ ಸಿಗ್ನಲ್‌ಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಯಾವ ಮಾರ್ಗದಲ್ಲಿ ಹೆಚ್ಚು ವಾಹನ ದಟ್ಟಣೆ (ಉದ್ದವಾದ ವಾಹನಗಳ ಸಾಲು) ಇದೆ ಎಂಬುದನ್ನು ಪತ್ತೆ ಹೆಚ್ಚಿ ಆ ಮಾರ್ಗದ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸಮಯದ ಗ್ರೀನ್‌ ಸಿಗ್ನಲ್‌ ನೀಡಲಾಗುತ್ತದೆ. ಕಡಿಮೆ ವಾಹನಗಳ ಸಾಲು ಇರುವ ಕಡೆಗೆ ಕಡಿಮೆ ಗ್ರೀನ್‌ ಸಿಗ್ನಲ್‌ ಸಮಯ ತಾನಾಗೇ ಕಡಿಮೆ ಆಗುತ್ತದೆ. ಅಲ್ಲದೆ, ಗ್ರೀನ್‌ ಸಿಗ್ನಲ್‌ ಮಾರ್ಗದಲ್ಲಿ 60 ಸೆಕೆಂಡ್‌ನೊಳಗೆ ಯಾವುದೇ ವಾಹನ ಹಾದುಹೋಗಿದ್ದರೆ ತಕ್ಷಣ ರೆಡ್ ಸಿಗ್ನಲ್‌ ತೋರಿಸಲಿದ್ದು, ಮತ್ತೊಂದು ಮಾರ್ಗಕ್ಕೆ ಗ್ರೀನ್‌ ಸಿಗ್ನಲ್‌ ಬೀಳಲಿದೆ.

ಅಷ್ಟೇ ಅಲ್ಲ, ಸಿಗ್ನಲ್‌ ಸಿಕ್ರನೈಸೇಷನ್‌ ತಂತ್ರಜ್ಞಾನದಿಂದಾಗಿ ಒಂದು ಸಿಗ್ನಲ್‌ನಿಂದ ಮತ್ತೊಂದು ಸಿಗ್ನಲ್‌ಗೂ ಯಾವ ಮಾರ್ಗದಲ್ಲಿ ಹೆಚ್ಚು ವಾಹನ ದಟ್ಟಣೆ ಇದೆ ಎಂಬ ಮಾಹಿತಿ ರವಾನೆಯಾಗಲಿದೆ. ಇದರಿಂದ ಮುಂದಿನ ಸಿಗ್ನಲ್‌ನಲ್ಲೂ ಕೂಡ ಹೆಚ್ಚು ವಾಹನ ದಟ್ಟಣೆ ಇರುವ ಭಾಗಕ್ಕೆ ಹೆಚ್ಚಿನ ಸಮಯ ಗ್ರೀನ್‌ ಸಿಗ್ನಲ್‌ ನೀಡಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.₹58 ಕೋಟಿಗೆ ಅನುಮೋದನೆ:

ಬೆಂಗಳೂರಿನಲ್ಲಿ ಹಾಲಿ ಸುಮಾರು 398 ಸಂಚಾರಿ ಸಿಗ್ನಲ್‌ಗಳಿವೆ. ಗಂಟೆಗೆ 8 ಸಾವಿರ ವಾಹನಗಳು ಸಂಚರಿಸುವ ಸ್ಥಳಗಳನ್ನು ಗುರುತಿಸಿ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತದೆ. ಈ ಪೈಕಿ ಈಗಾಗಲೇ 29 ಸಿಗ್ನಲ್‌ಗಳನ್ನು ಉನ್ನತೀಕರಿಸಲಾಗಿದೆ. ಈಗ ಇನ್ನೂ 136 ಸಿಗ್ನಲ್‌ಗಳನ್ನು ಉನ್ನತೀಕರಿಸುವ ಜೊತೆಗೆ ಒಟ್ಟು 165 ಸಂಚಾರಿ ಸಿಗ್ನಲ್‌ಗಳು ಉನ್ನತೀಕರಣವಾದಂತಾಗಲಿವೆ. ಇವುಗಳ ಉನ್ನತೀಕರಣ ಮತ್ತು ಅವುಗಳ ನಿರ್ವಹಣೆಗೆ ಸಂಪುಟ ಸಭೆಯಲ್ಲಿ ಒಟ್ಟು ₹58.54 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ವಿವರಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ