ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ (೩೫) ಕೊಲೆಯಾದ ವ್ಯಕ್ತಿ. ನಗರದ ಮೈಷುಗರ್ ಕಾರ್ಖಾನೆ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ -ಜಯಮ್ಮ ದಂಪತಿ ಪುತ್ರ ಗುರು ವಿಲಾಸ್ ಟಾಟಾ ಎಸಿ ಚಾಲಕನಾಗಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್‌ಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದನು. ಈ ಸಮಯದಲ್ಲಿ ಮಂಡ್ಯ ಸ್ವರ್ಣಸಂದ್ರದ ಮಾನಸ ಎಂಬಾಕೆಯನ್ನು ಪ್ರೀತಿಸಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದನು. ದಂಪತಿಗೆ ಹೆಣ್ಣು ಮಗು ಇತ್ತು.ಮದುವೆ ನಂತರ ಬೆಂಗಳೂರಿನಲ್ಲಿ ಸ್ವಂತ ಕಾರು ಚಾಲನೆ ಮಾಡಿಕೊಂಡು ಗುರು ವಿಲಾಸ್ ಜೀವನ ನಿರ್ವಹಣೆ ಮಾಡುತ್ತಿದ್ದನು. ಆದರೆ, ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಗುರುವಿಲಾಸ್ ತನ್ನ ಪತ್ನಿ ನಡವಳಿಕೆ ಮೇಲೆ ಅನುಮಾನಪಡುತ್ತಿದ್ದರಿಂದ ಆಗಾಗ ದಂಪತಿ ನಡುವೆ ಕಲಹ ನಡೆಯುತ್ತಿತ್ತು. ಗಂಡನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಮಾನಸ ಗಂಡನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು. ನಂತರದಲ್ಲಿ ಗುರು ವಿಲಾಸ್ ಸಹ ಮಂಡ್ಯದ ಬಸವನಗುಡಿಯಲ್ಲಿದ್ದ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದನು.
ಪತ್ನಿಯ ವಿಚಾರವಾಗಿ ಸ್ವಗ್ರಾಮ ಕಡಿಲುವಾಗಿಲು ಗ್ರಾಮದಲ್ಲಿ ಇತ್ತೀಚೆಗೆ ಯುವಕನೊಬ್ಬನ ಮೇಲೆ ಗುರು ವಿಲಾಸ್ ಹಲ್ಲೆ ನಡೆಸಿದ್ದನು. ಅಷ್ಟೇ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ರೌಡಿಗಳೊಂದಿಗೂ ಒಡನಾಟ ಹೊಂದಿದ್ದನು ಎನ್ನಲಾಗಿದೆ. ಯಾವ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.