ಕನ್ನಡಪ್ರಭ ವಾರ್ತೆ ಹಲಗೂರು
ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಮುತ್ತತ್ತಿಯಲ್ಲಿ ನಡೆದಿದೆ. ಮೂಲತಃ ರಾಮನಗರ ಜಿಲ್ಲೆ ದೊಡ್ಡ ಗಂಗಾವಾಡಿ ಬೋರೇಗೌಡರ ಪುತ್ರ ಹಾಲಿ ಬೆಂಗಳೂರು ನಾಯಂಡಹಳ್ಳಿ ನಿವಾಸಿ ಡಿ.ಬಿ.ವಿಶ್ವಾಸ್ (27) ಮೃತಪಟ್ಟವರು.
ಐದು ಸ್ನೇಹಿತರ ಜೊತೆ ಭಾನುವಾರ ಮುತ್ತತ್ತಿ ಆಂಜನೇಯಸ್ವಾಮಿ ದೇವರ ದರ್ಶನ ಪಡೆಯಲು ಬಂದಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಡಿ.ಬಿ.ವಿಶ್ವಾಸ್ ಸಾವನ್ನಪ್ಪಿದರು. ಈತ ಮನೆಗಳ ಇಂಟೀರಿಯರ್ ಡಿಸೈನ್ ವರ್ಕ್ ಮಾಡುತ್ತಿದ್ದ ಎನ್ನಲಾಗಿದೆ.
ಹಲಗೂರು ಪೊಲೀಸರು ಸೋಮವಾರ ಕಾವೇರಿ ನದಿಯಲ್ಲಿ ನುರಿತ ಈಜುಗಾರಿಂದ ಶವವನ್ನು ಹುಡುಕಿಸಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ನೀಡಿದ್ದಾರೆ. ಹಲಗೂರು ಪೊಲೀಸ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ವಿಜಯ ವೀರೇಗೌಡ ಚಿಕಿತ್ಸೆ ಫಲಕಾರಿಯಾಗದೇ ಸಾವು
ಮದ್ದೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೆಂಗಳೂರು ಮಹಾನಗರ ಪಾಲಿಕೆ ನಿವೃತ್ತ ಪ್ರಥಮ ದರ್ಜೆ ಸಹಾಯಕ ವಿ.ಟಿ.ವಿಜಯ ವೀರೇಗೌಡ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಶೋಭಾ, ಪುತ್ರಿ ವರ್ಷಿಣಿ ಹಾಗೂ ಪುತ್ರ ವೆಂಕಟೇಶ್ ಇದ್ದಾರೆ. ಮೂಲತಃ ತಾಲೂಕು ವಳೆಗೆರೆಹಳ್ಳಿ ವಿಜಯ್ ವೀರೇಗೌಡ ಬೆಂಗಳೂರು ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು.
ಕಳೆದ ಡಿ.24ರಂದು ಬೆಂಗಳೂರಿನಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಂದಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ವೀರೇಗೌಡ ಫಲಕಾರಿಯಾಗದೆ ಸೋಮವಾರ ಮುಂಜಾನೆ ಅಸುನೀಗಿದ್ದಾರೆ.
ಮೃತರ ಅಂತ್ಯಕ್ರಿಯ ಸ್ವಗ್ರಾಮ ವಳಗೆರೆಹಳ್ಳಿಯಲ್ಲಿ ಸಂಜೆ ನೆರವೇರಿತು. ವಿಜಯ್ ವೀರೇಗೌಡ ನಿಧನಕ್ಕೆ ಮದ್ದೂರು ಕ್ರೀಡಾ ಬಳಗದ ಸಂಸ್ಥಾಪಕ ಅಧ್ಯಕ್ಷ ವಿ.ಕೆ .ಜಗದೀಶ್ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.