ಅಶ್ಲೀಲ ಫೋಟೋ ಇದೆ ಎಂದು ₹65 ಲಕ್ಷ ಸುಲಿಗೆ

KannadaprabhaNewsNetwork |  
Published : Feb 05, 2024, 01:50 AM ISTUpdated : Feb 05, 2024, 01:15 PM IST
ದೌರ್ಜನ್ಯ | Kannada Prabha

ಸಾರಾಂಶ

ಖಾಸಗಿ ಫೋಟೋ ಇರುವುದಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಸ್ನೇಹಿತರೇ ಬೆದರಿಸಿ 65 ಲಕ್ಷ ರು. ಹಣ ಸುಲಿಗೆ ಮಾಡಿರುವ ಆರೋಪದಡಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಫೋಟೋ ಇರುವುದಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಸ್ನೇಹಿತರೇ ಬೆದರಿಸಿ 65 ಲಕ್ಷ ರು. ಹಣ ಸುಲಿಗೆ ಮಾಡಿರುವ ಆರೋಪದಡಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಮೂಲದ 26 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ವಂಚನೆಗೆ ಒಳಗಾದವರು. ಈತ ನೀಡಿದ ದೂರಿನ ಮೇರೆಗೆ ಎಚ್‌.ಎಸ್‌.ಆರ್‌. ಲೇಔಟ್‌ ನಿವಾಸಿಗಳಾದ ಅಕ್ಷಯ್‌ ಕುಮಾರ್ ಮತ್ತು ಭರತ್‌ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ದೂರುದಾರ ಅಂಬೇಡ್ಕರ್‌ ರಸ್ತೆಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಆರೋಪಿ ಅಕ್ಷಯ್‌ಕುಮಾರ್‌ ಕಳೆದ 18 ವರ್ಷಗಳಿಂದ ಸ್ನೇಹಿತನಾಗಿದ್ದು, ಈತನ ಆಣ್ಣ ಭರತ್‌ ಸಹ ಪರಿಚಿತ. 

ಇತ್ತೀಚೆಗೆ ಅಕ್ಷಯ್‌ ಮತ್ತು ಭರತ್‌, ದೂರುದಾರನನ್ನು ಭೇಟಿಯಾಗಿ ‘ನಿನ್ನ ಖಾಸಗಿ ಫೋಟೋಗಳು ಬೇರೆ ವ್ಯಕ್ತಿಯ ಬಳಿ ಇದ್ದು, ಆತ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಹೇಳುತ್ತಿದ್ದಾನೆ. 12 ಲಕ್ಷ ರು. ಕೊಟ್ಟರೆ ಆ ಫೋಟೋಗಳನ್ನು ವಾಪಾಸ್‌ ಪಡೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.

ಇದರಿಂದ ಭಯಗೊಂಡ ದೂರುದಾರ ಸಾಲ ಪಡೆದು 11.20 ಲಕ್ಷ ರು. ಹಣವನ್ನು ಅಕ್ಷಯ್‌ಗೆ ನೀಡಿದ್ದಾನೆ. ನಂತರ ಪುನಃ ಇಬ್ಬರು ದೂರುದಾರನ ಬಳಿ ‘ಆ ವ್ಯಕ್ತಿ ಮತ್ತಷ್ಟು ಹಣ ಕೇಳುತ್ತಿದ್ದಾನೆ’ ಎಂದಿದ್ದಾರೆ. ಆಗ ಬ್ಯಾಂಕ್‌ನಿಂದ 10 ಲಕ್ಷ ರು. ಸಾಲ ಪಡೆದು ಆ ಹಣವನ್ನು ಆರೋಪಿಗಳಿಗೆ ನೀಡಿದ್ದಾನೆ.

ಅಷ್ಟಕ್ಕೆ ತೃಪ್ತರಾಗದ ಆರೋಪಿಗ ಅಕ್ಷಯ್‌ ಮತ್ತು ಭರತ್‌, ಮತ್ತೆ ದೂರುದಾರನನ್ನು ಭೇಟಿಯಾಗಿ ‘ಅಪರಿಚಿತ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದಾನೆ. ಹಣ ಕೊಡಲೇ ಬೇಕು’ ಎಂದು ಒತ್ತಾಯಿಸಿದ್ದಾರೆ. 

ಆತಂಕಗೊಂಡ ದೂರುದಾರ, ಸ್ನೇಹಿತರಿಂದ 4 ಲಕ್ಷ ರು. ಹಾಗೂ ತಂದೆಯಿಂದ 8 ಲಕ್ಷ ರು. ಪಡೆದು ಒಟ್ಟು 12 ಲಕ್ಷ ರು. ಹಣವನ್ನು ಆರೋಪಿಗಳಿಗೆ ನೀಡಿದ್ದಾನೆ.

ಆರೋಪಿಯ ಗೆಳತಿಯಿಂದಲೂ ಸುಲಿಗೆ: ಈ ನಡುವೆ ಆರೋಪಿ ಅಕ್ಷಯ್‌ನ ಗೆಳತಿ ಕವಿತಾ ದೂರುದಾರನಿಗೆ ಕರೆ ಮಾಡಿ, ‘ಅಪರಿಚಿತ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ನಿನ್ನ ಸ್ನೇಹಿತ ಅಕ್ಷಯ್‌, ನನ್ನಿಂದ 5 ಲಕ್ಷ ರು. ಸಾಲ ಪಡೆದು ವ್ಯಕ್ತಿಗೆ ನೀಡಿದ್ದಾನೆ’ ಎಂದು ಹೇಳಿದ್ದಾಳೆ. ಹೀಗಾಗಿ ದೂರುದಾರ ಸ್ನೇಹಿತನೊಬ್ಬನಿಂದ 5 ಲಕ್ಷ ರು. ಸಾಲ ಪಡೆದು ಆ ಹಣವನ್ನು ಕವಿತಾಗೆ ನೀಡಿದ್ದಾನೆ.

ಅಕ್ಕನ ಬಳಿ ಹಣ ಪಡೆದರು: ನಂತರ ಆರೋಪಿ ಅಕ್ಷಯ್‌, ದೂರುದಾರನ ಅಕ್ಕನ ಮೊಬೈಲ್‌ಗೆ ಮೆಸೇಜ್‌ ಕಳುಹಿಸಿ, ‘ನಿಮ್ಮ ತಮ್ಮನಿಗೆ ತೊಂದರೆಯಾಗಿದೆ ಎಂದು ಸುಳ್ಳು ಹೇಳಿ 12.20 ಲಕ್ಷ ರು. ಹಣ ಪಡೆದಿದ್ದಾನೆ. 

ಬಳಿಕ ಆರೋಪಿ ಅಕ್ಷಯ್‌, ‘ಅಪರಿಚಿತ ವ್ಯಕ್ತಿಯ ಮೊಬೈಲ್‌ ಸ್ಕ್ಯಾನ್‌ ಮಾಡಿ ಟ್ರಾಪ್‌ ಮಾಡಲು 15 ಲಕ್ಷ ರು. ಕೊಡಬೇಕು’ ಎಂದು ಬಲವಂತಪಡಿಸಿದ್ದಾನೆ. ಹೀಗಾಗಿ ದೂರುದಾರ, ತನ್ನ ಅಕ್ಕ ಮತ್ತು ತಾಯಿಯಿಂದ 15 ಲಕ್ಷ ರು. ಪಡೆದು ಅಕ್ಷಯ್‌ಗೆ ನೀಡಿದ್ದಾನೆ. 

ನಂತರವೂ ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಅನುಮಾನಗೊಂಡ ದೂರುದಾರ, ಅಪರಿಚಿತ ವ್ಯಕ್ತಿಯ ಹೆಸರಲ್ಲಿ ಸುಳ್ಳು ಹೇಳಿ ಒಟ್ಟು 65 ಲಕ್ಷ ರು. ಹಣ ಸುಲಿಗೆ ಮಾಡಿದ್ದು ಅರಿವಿಗೆ ಬಂದಿದೆ.

ಹಂತಹಂತವಾಗಿ ₹65 ಲಕ್ಷ ಸುಲಿದ ಮಿತ್ರದ್ರೋಹಿಗಳು!
ಆರೋಪಿಗಳು ಹಂತಹಂತವಾಗಿ ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಅನುಮಾನಗೊಂಡ ದೂರುದಾರನಿಗೆ ಅಪರಿಚಿತ ವ್ಯಕ್ತಿಯ ಬಳಿ ಖಾಸಗಿ ಫೋಟೋಗಳಿವೆ ಎಂದು ಸುಳ್ಳು ಹೇಳಿ ಒಟ್ಟು 65 ಲಕ್ಷ ರು. ಹಣ ಸುಲಿಗೆ ಮಾಡಿರುವುದು ಅರಿವಿಗೆ ಬಂದಿದೆ. 

ಬಳಿಕ ವಿಧಾನಸೌಧ ಪೊಲೀಸ್‌ ಠಾಣೆಗೆ ಬಂದು ಅಕ್ಷಯ್ ಮತ್ತು ಭರತ್‌ ವಿರುದ್ಧ ದೂರು ನೀಡಿದ್ದಾನೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು