ಮಳವಳ್ಳಿ : 5 ಸಾವಿರ ರು. ಲಂಚ ಪಡೆಯುತ್ತಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಗುರುವಾರ ರಾತ್ರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ.
ತಾಲೂಕಿನ ಅಂಚೆದೊಡ್ಡಿ ಗ್ರಾಮದ ನವೀನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಜಾಮೀನಿನ ಮೇಲೆ ನವೀನ್ ಹೊರ ಬಂದಿದ್ದರು. ನವೀನ್ ಮೇಲೆ ರೌಡಿ ಶೀಟರ್ ತೆಗೆಯುವುದಾಗಿ ಬೆದರಿಸಿದ ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ 5 ಸಾವಿರ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ನವೀನ್ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಗುರುವಾರ ರಾತ್ರಿ ಠಾಣೆ ಎದುರಿನ ಹೋಟೆಲ್ ವೊಂದರ ಬಳಿ ವೆಂಕಟೇಶ್ 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಹಾಗೂ ಡಿವೈಎಸ್‌ಪಿ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ಲೇಪಾಕ್ಷಿಮೂರ್ತಿ, ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೆಂಕಟೇಶ್ ಅವರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.
ಮಳವಳ್ಳಿ: ಪಟ್ಟಣದ ಗೌಡಯ್ಯನ ಬೀದಿಯಲ್ಲಿ ಗುರುವಾರ ಹಾಡಹಗಲೇ ರಮೇಶ್ ಅವರ ಮನೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರು. ಹಾಗೂ ಚಿನ್ನಾಭರಣ ದೋಚಿ ಪರಾರಿದ್ದಾರೆ.
ರಮೇಶ್ ಅವರು ಕೆಲಸಕ್ಕೆ ತೆರಳಿದ ವೇಳೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಬೀರುನಲ್ಲಿದ್ದ 3 ಲಕ್ಷ ನಗದು, 70 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ರಮೇಶ್ ಬಾಗಿಲು ತೆರದಿದ್ದನ್ನು ಕಂಡು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಎಂ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.