ವಿದೇಶದಿಂದ ತಂದಿದ್ದ ₹52.87 ಕೋಟಿ ಮೌಲ್ಯದ ಡ್ರಗ್ಸ್ ವಿಮಾನ ನಿಲ್ದಾಣದಲ್ಲಿ ವಶ

KannadaprabhaNewsNetwork |  
Published : Nov 07, 2025, 04:15 AM IST

ಸಾರಾಂಶ

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ವಿದೇಶದಿಂದ ರಾಜ್ಯಕ್ಕೆ ಕಳ್ಳ ಮಾರ್ಗದಲ್ಲಿ ಹರಿದು ಬರುತ್ತಿದ್ದ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ವಿದೇಶದಿಂದ ರಾಜ್ಯಕ್ಕೆ ಕಳ್ಳ ಮಾರ್ಗದಲ್ಲಿ ಹರಿದು ಬರುತ್ತಿದ್ದ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.

ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಅ.29 ರಿಂದ ನ.5 ವರೆಗೆ ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆದಿದ್ದು, ಬ್ಯಾಂಕ್‌ಹಾಂಗ್‌ನಿಂದ ಬಂದಿಳಿದ ನಾಲ್ವರು ಪ್ರಯಾಣಿಕರು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಈ ಪೆಡ್ಲರ್‌ಗಳಿಂದ 52.87 ಕೋಟಿ ರು. ಮೌಲ್ಯದ 52 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ಹಾಂಗ್‌ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ ಬ್ಯಾಂಕ್‌ಹಾಂಗ್ ನಿಂದ ಕೆಐಎಗೆ ಆಗಮಿಸಿಸುವ ವಿಮಾನಗಳ ಮೇಲೆ ಕಣ್ಣಿಡಲಾಯಿತು. ಅ.29 ರಂದು ಓರ್ವ ಪ್ರಯಾಣಿಕ ಸಿಕ್ಕಿಬಿದ್ದರು. ಈತನ ಬಳಿ 37.88 ಕೋಟಿ ರು. ಮೌಲ್ಯದ 37 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮರುದಿನ ಮತ್ತಿಬ್ಬರು ಬ್ಯಾಂಕ್‌ಹಾಂಗ್‌ನಿಂದ ಬಂದವರ ಬಳಿ 8.49 ಕೋಟಿ ರು. ಮೌಲ್ಯದ 8.49 ಹೈಡ್ರೋ ಗಾಂಜಾ ಕೆಜಿ ಸಿಕ್ಕಿತು. ಅದೇ ದೇಶದಿಂದ ನ.1 ರಂದು ಬಂದಿಳಿದ ಪೆಡ್ಲರ್‌ ಬಳಿ 3.18 ಕೋಟಿ ರು ಬೆಲೆಯ ಹಾಗೂ ನ.5 ರಂದು ಬಂದ ಪೆಡ್ಲರ್‌ ಹತ್ತಿರ 3.32 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುಬೈ ಮೂಲಕ ಸಾಗಾಣೆ?:

ಅ.29 ರಂದು ಬ್ಯಾಂಕ್‌ಹಾಂಗ್‌ನಿಂದ ಬಂದ ಪೆಡ್ಲರ್‌ ದುಬೈ ಮಾರ್ಗವಾಗಿ ಕೆಐಎಗೆ ಬಂದಿದ್ದ. ಹೀಗಾಗಿ ದುಬೈನಲ್ಲಿ ಆತನಿಗೆ ಡ್ರಗ್ಸ್ ಮಾಫಿಯಾ ನೆರವು ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈತನ ಬಳಿ 37 ಕೋಟಿ ರು. ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.

ಬ್ಯಾಗ್‌ಗಳಲ್ಲಿ ಅಡಗಿಸಿ ಸಾಗಣೆ:

ವಿದೇಶದಿಂದ ಬರುವ ವೇಳೆ ಬ್ಯಾಗ್‌ಗಳಲ್ಲಿ ಹೈಡ್ರೋ ಗಾಂಜಾವನ್ನು ಅಡಗಿಸಿ ಆರೋಪಿಗಳು ತಂದಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಗ್‌ನಂತೆ ಕಾಣುತ್ತಿತ್ತು. ಆದರೆ ಅವುಗಳನ್ನು ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

1 ಕೆಜಿಗೆ ಬರೋಬ್ಬರಿ 1 ಕೋಟಿ ಬೆಲೆ!:

ಥೈಲ್ಯಾಂಡ್ ಸೇರಿದಂತೆ ಕೆಲ ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ಡ್ರಗ್ಸ್ ಮಾಫಿಯಾ ಸದಸ್ಯರು ತಯಾರಿಸುತ್ತಾರೆ. ಆನ್ ಲೈನ್‌ ಮೂಲಕವೇ ಆ ಗಾಂಜಾವನ್ನು ಕೆಲವು ಸ್ಥಳೀಯರು ತರಿಸಿಕೊಳ್ಳುತ್ತಾರೆ. ಭಾರತದ ಮಾರುಕಟ್ಟೆಯಲ್ಲಿ ಹೈಡ್ರೋ ಗಾಂಜಾಗೆ ಭಾರಿ ಬೆಲೆ ಇದ್ದು, ತಲಾ 1 ಕೆಜಿ 1 ಕೋಟಿ ರು. ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಸೇರಿ ಮೂವರು ಅರೆಸ್ಟ್‌
ಲಗ್ನ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದು ಮಹಿಳೆ ಕೈ-ಕಾಲು ಕಟ್ಟಿ ದರೋಡೆ