ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರಾಧ ಪ್ರಕರಣದಲ್ಲಿ ತಮ್ಮ ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಹಾಗೂ ಆತನ ಇಬ್ಬರು ಸಹಚರರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.ಕಲಾಸಿಪಾಳ್ಯದ ರೌಡಿ ಶಹಜಾದ್, ಆತನ ಸಹಚರರಾದ ಅನಿಷ್ ಹಾಗೂ ಯಾಸಿನ್ ಬಂಧಿತರಾಗಿದ್ದು, ಎರಡು ದಿನಗಳ ಹಿಂದೆ ತಿಲಕನಗರ ಸಮೀಪ ರೌಡಿ ಶಹಜಾದ್‌ನನ್ನು ಬಂಧಿಸಲು ಕಲಾಸಿಪಾಳ್ಯ ಠಾಣೆ ಪೊಲೀಸರು ತೆರಳಿದ್ದರು. ಆ ವೇಳೆ ತನ್ನ ಸಹಚರರ ಜತೆ ಸೇರಿ ಸಿಬ್ಬಂದಿ ಮೇಲೆ ರೌಡಿ ಗಲಾಟೆ ಮಾಡಿದ್ದ. ಬಳಿಕ ಆರೋಪಿಗಳನ್ನು ತಿಲಕನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲಾಸಿಪಾಳ್ಯದ ಶಹಜಾದ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಕಳ್ಳತನ, ಸುಲಿಗೆ ಹಾಗೂ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್ ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ಕಲಾಸಿಪಾಳ್ಯ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಹಳೇ ಪ್ರಕರಣದ ವಿಚಾರಣೆಗೆ ಹಾಜರಾಗದೆ ಹಿನ್ನೆಲೆಯಲ್ಲಿ ಆತನ ವಿರುದ್ಧ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಹೀಗಾಗಿ ಶಹಜಾದ್ ಪತ್ತೆಗೆ ಕಲಾಸಿಪಾಳ್ಯ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು.ಕೊನೆಗೆ ತಿಲನಗರ ಬಳಿ ಆತನು ಇರುವ ಬಗ್ಗೆ ಗೊತ್ತಾಗಿದೆ. ಈ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಕಲಾಸಿಪಾಳ್ಯ ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ತನ್ನ ಗುಂಪಿನ ಜತೆ ಸೇರಿ ಆತ ಗೂಂಡಾಗಿರಿ ನಡೆಸಿದ್ದಾನೆ. ತಕ್ಷಣವೇ ತಿಲಕನಗರ ಪೊಲೀಸರಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಕರೆಸಿದ್ದಾರೆ. ಈ ಬಗ್ಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.