ಕನ್ನಡಪ್ರಭ ವಾರ್ತೆ, ಮದ್ದೂರು/ಕೆ.ಎಂ.ದೊಡ್ಡಿ

ಪಾಪಿ ಮನುಷ್ಯರ ಸ್ವಾರ್ಥಕ್ಕೆ ಮೂಕ ಹಸು ನಾಲಿಗೆ ಕಳೆದುಕೊಂಡು ನರಳಾಡುತ್ತಿರುವ ಅಮಾನವೀಯ ಘಟನೆ ಮದ್ದೂರು ತಾಲೂಕು ಹರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜಮ್ಮಣ್ಣಿ ಎಂಬುವರಿಗೆ ಸೇರಿದ ಹಸು ನಾಡಬಾಂಬ್ ಸ್ಫೋಟದಿಂದ ಬಾಯಿ ಛಿದ್ರವಾಗಿದೆ.

ಮದ್ದೂರು ತಾಲೂಕು ಹರಳಹಳ್ಳಿ ಗ್ರಾಮದ ರಾಜಮ್ಮಣ್ಣಿ ಅವರು ತಮ್ಮ ಹಸುವನ್ನು ಗ್ರಾಮದ ಹೊರ ವಲಯದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಕಾಡುಹಂದಿ ಬೇಟೆಗಾಗಿ ಇರಿಸಿದ್ದ ನಾಡ ಬಾಂಬ್‌ನ್ನು ಹುಲ್ಲು ಎಂದು ಭ್ರಮಿಸಿದ ಹಸು ಕಚ್ಚಿದೆ. ತಕ್ಷಣ ಹಸುವಿನ ಬಾಯಿ ಛಿದ್ರಗೊಂಡಿದೆ. ಇದರಿಂದಾಗಿ ಹಸು ತನ್ನ ನಾಲಿಗೆಯನ್ನೂ ಕಳೆದುಕೊಂಡು ಮೂಕರೋಧನ ಅನುಭವಿಸುವಂತಾಗಿದೆ.

ಬಾಯಿ, ನಾಲಿಗೆ ಕಳೆದುಕೊಂಡ ಹಸು ನರಳಾಟವನ್ನು ಕಂಡ ರಾಜಮ್ಮ ಅವರ ಗೋಳಾಟ ತೀರದಾಗಿದೆ. ಪಾಪಿ ಮನುಷ್ಯನ ಸ್ವಾರ್ಥದಿಂದಾಗಿ ಹಸು ತನ್ನ ಬಾಯಿಯನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.


ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪಶುಸಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್ ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹಸುವಿಗೆ ಚಿಕಿತ್ಸೆ ನೀಡಿದರು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.