ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌ ಗ್ಯಾಂಗ್‌ ವಿರುದ್ಧ ಕೊಲೆ, ಕಿಡ್ನಾಪ್‌ ದೋಷಾರೋಪ

KannadaprabhaNewsNetwork | Updated : Sep 04 2024, 05:40 AM IST

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 14 ಮಂದಿ ವಿರುದ್ಧ ಕೊಲೆ ಮತ್ತು ಅಪಹರಣ ಹಾಗೂ ಇನ್ನು ಮೂವರ ಮೇಲೆ ಸಾಕ್ಷ್ಯ ನಾಶ ಆರೋಪ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. 

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 14 ಮಂದಿ ವಿರುದ್ಧ ಕೊಲೆ ಮತ್ತು ಅಪಹರಣ ಹಾಗೂ ಇನ್ನುಳಿದ ಮೂವರ ಮೇಲೆ ಸಾಕ್ಷ್ಯ ನಾಶ ಆರೋಪವನ್ನು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಪೂರಕ ಎನ್ನುವಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಪಟ್ಟಿಯಲ್ಲಿ ಪ್ರತಿಯೊಬ್ಬ ಆರೋಪಿ ಪಾತ್ರವನ್ನು ಉಲ್ಲೇಖಿಸಲಾಗುತ್ತದೆ. ಇನ್ನೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಪ್ರಾಥಮಿಕ ಹಂತದ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಿದ್ದಪಡಿಸಿ ವಿಶೇಷ ಅಭಿಯೋಜಕರ ಪರಾಮರ್ಶೆ ನೀಡಲಾಗಿದೆ. ಅಲ್ಲದೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಕೆಲವು ವೈಜ್ಞಾನಿಕ ವರದಿಗಳು ಬರಬೇಕಿದೆ. ಮೊದಲು ನ್ಯಾಯಾಲಯಕ್ಕೆ ಪ್ರಾಥಮಿಕ ಹಂತದ ಆರೋಪಪಟ್ಟಿಯನ್ನು ಸಲ್ಲಿಸುತ್ತೇವೆ. ಎಫ್‌ಎಸ್‌ಎಲ್ ವರದಿ ಬಳಿಕ ಅಂತಿಮ ವರದಿ ಸಲ್ಲಿಸಲಾಗುತ್ತದೆ. ಆರೋಪಪಟ್ಟಿಯಲ್ಲಿ ಪ್ರತಿಯೊಬ್ಬ ಆರೋಪಿ ಪಾತ್ರದ ಸ್ವರೂಪ ಉಲ್ಲೇಖವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಹತ್ಯೆ ಕೃತ್ಯದ ತನಿಖೆ ವೇಳೆ ಲಭ್ಯವಾದ ಸಾಂದರ್ಭಿಕ, ಪ್ರತ್ಯಕ್ಷ, ವೈಜ್ಞಾನಿಕ ಹಾಗೂ ವೈದ್ಯಕೀಯ ಪುರಾವೆಗಳನ್ನು ವಿಶ್ಲೇಷಿಸಿದಾಗ ಬಂಧಿತ 17 ಆರೋಪಿಗಳ ಪಾತ್ರದ ಸ್ವರೂಪ ಸ್ಪಷ್ಟವಾಯಿತು. ಈ ಹಿನ್ನಲೆಯಲ್ಲಿ ದರ್ಶನ್‌, ಅ‍ವರ ಪ್ರಿಯತಮೆ ಪವಿತ್ರಾಗೌಡ, ಆಪ್ತರಾದ ಪಟ್ಟಣಗೆರೆ ವಿನಯ್‌, ಲಕ್ಷ್ಮಣ್‌, ಜಗದೀಶ್, ಧನರಾಜ್‌, ಪವನ್, ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ನಂದೀಶ್‌, ಪ್ರದೂಷ್‌, ನಾಗರಾಜ, ದೀಪಕ್‌, ರವಿಶಂಕರ್‌ ಹಾಗೂ ಅನುಕುಮಾರ್‌ ವಿರುದ್ಧ ಕೊಲೆ ಮತ್ತು ಅಪಹರಣ ಕೃತ್ಯವು ತನಿಖೆಯಲ್ಲಿ ರುಜುವಾತಾಗಿದೆ. ಇನ್ನುಳಿದ ಕೇಶವ ಮೂರ್ತಿ, ಕಾರ್ತಿಕ್‌ ಹಾಗೂ ನಿಖಿಲ್‌ ನಾಯ್ಕ್‌ರನ್ನು ಸಾಕ್ಷ್ಯ ನಾಶದ ಆರೋಪಿಗಳನ್ನಾಗಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ರೇಣುಕಾಸ್ವಾಮಿ ಹತ್ಯೆ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ತಾವಾಗಿಯೇ ಹೋಗಿ ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ದಾಗಿ ಹೇಳಿ ಕಾರ್ತಿಕ್, ನಿಖಲ್ ಹಾಗೂ ಕೇಶವಮೂರ್ತಿ ಶರಣಾಗಿದ್ದರು. ಈ ಆರೋಪಿಗಳಿಗೆ ದರ್ಶನ್ ಹಾಗೂ ಅ‍ವರ ಆಪ್ತರು ಹಣದ ಆಮಿಷವೊಡ್ಡಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು. ಅಲ್ಲದೆ ದರ್ಶನ್‌ ಮನೆಯಲ್ಲಿ 40 ಲಕ್ಷ ರು. ಹಾಗೂ ಅವರ ಆಪ್ತ ಪ್ರದೂಷ್ ಮನೆಯಲ್ಲಿ 30 ಲಕ್ಷ ರು. ಹಣ ಕೂಡ ಜಪ್ತಿಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರೇಣು ಶವ ಸಾಗಿಸಲು ಕಿಡ್ನಾಪರ್‌ಗಳ ಸಹಾಯ:

ಇನ್ನು ದರ್ಶನ್ ಸೂಚನೆ ಮೇರೆಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಿಸಿದ್ದ ಆ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ, ಕಾರು ಚಾಲಕ ರವಿಶಂಕರ್‌ ಅಲಿಯಾಸ್ ರವಿ ಹಾಗೂ ಅನುಕುಮಾರ್‌ ಪಾತ್ರವಹಿಸಿದ್ದರು. ಆದರೆ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್‌ ಅವರಿಗೆ ರೇಣುಕಾಸ್ವಾಮಿಯನ್ನು ಒಪ್ಪಿಸಿದ ನಂತರ ಈ ಮೂವರು ಕೂಡ ಅಲ್ಲಿಂದ ತೆರಳದೆ ಹತ್ಯೆ ವೇಳೆ ಉಪಸ್ಥಿತರಿದ್ದರು. ಅಲ್ಲದೆ ಹತ್ಯೆ ಬಳಿಕ ಮೃತದೇಹವನ್ನು ಮಾಗಡಿ ರಸ್ತೆ ಸುಮನಹಳ್ಳಿ ಜಂಕ್ಷನ್‌ ಬಳಿ ರಾಜಕಾಲುವೆ ಎಸೆಯಲು ಈ ಮೂವರು ನೆರವಾಗಿದ್ದರು. ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಮೂವರ ಮೇಲೂ ಕೊಲೆ ಆರೋಪ ಸಾಬೀತಾಗಿದೆ. ಅಲ್ಲದೆ ಶರಣಾಗತಿಯಾದ ನಾಲ್ವರ ಪೈಕಿ ರಾಘವೇಂದ್ರ ಕೂಡ ಇದ್ದ ಎಂದು ತಿಳಿದು ಬಂದಿದೆ.

Share this article