ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಮಮೂರ್ತಿನಗರದ ನಿವಾಸಿ ಗೌತಮ್ (29) ಬಂಧಿತ. ದೇವಿ ಎಂಬ ತೃತೀಯಲಿಂಗಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಜೆಸ್ಟಿಕ್‌ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಹೊರ ಭಾಗದಲ್ಲಿ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ದೇವಿ ಎಂಬುವರು ನಿಂತಿದ್ದರು. ಮದ್ಯ ಸೇವಿಸಿದ್ದ ಆರೋಪಿ ಸುಲಿಗೆ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದ. ಹಣ ಕೊಡುವಂತೆ ದೇವಿಯನ್ನು ಕೇಳಿದ್ದ. ಆಗ ಕೊಡಲು ಆಕೆ ನಿರಾಕರಿಸಿದ್ದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆರೋಪಿ ದೇವಿ ತಲೆಗೆ ಹಲ್ಲೆ ಮಾಡಿ ಆಕೆಯ ಬ್ಯಾಗಿಗೆ ಕೈಹಾಕಿದ್ದ. ಹಲ್ಲೆಯಾಗಿದ್ದರೂ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ದೇವಿಗೆ ಆರೋಪಿ ಅವಾಚ್ಯ ಶಬ್ದದಿಂದ ನಿಂದಿಸಿ, ಚಾಕುವಿನಿಂದ ಮೂರು ಬಾರಿ ದೇಹದ ಇತರ ಭಾಗಗಳಿಗೆ ಚುಚ್ಚಿದ್ದ. ತೀವ್ರ ಗಾಯಗೊಂಡು ನೆಲಕ್ಕೆ ಕುಸಿದು ಬಿದ್ದ ದೇವಿ, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇವಿ ಕುಸಿದು ಬೀಳುತ್ತಿದ್ದಂತೆ ಆಕೆಯ ಬ್ಯಾಗಿನಲ್ಲಿದ್ದ ನಗದು ಹಾಗೂ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಮೃತೆ ದೇವಿ ಸ್ನೇಹಿತೆಯರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾಕ್ಷಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಎನ್.ಯತೀಶ್ ಡಿಸಿಪಿ, ಪಶ್ಚಿಮ ವಿಭಾಗ