ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು, 20 ಮಂದಿಗೆ ಗಾಯ

KannadaprabhaNewsNetwork |  
Published : Aug 21, 2026, 01:45 AM IST
20ಕೆಎಂಎನ್ ಡಿ12,13 | Kannada Prabha

ಸಾರಾಂಶ

ಹೆದ್ದಾರಿ ಟೋಲ್ ಕೇಂದ್ರದ ಬಳಿ ಸೂಚನಾ ಫಲಕ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ಚಾಲಕ ಸೇರಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹೆದ್ದಾರಿ ಟೋಲ್ ಕೇಂದ್ರದ ಬಳಿ ಸೂಚನಾ ಫಲಕ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ಚಾಲಕ ಸೇರಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಗುರುವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಸಂಭವಿಸಿದೆ.

ಉಡುಪಿ ಜಿಲ್ಲೆಯ ಬೈಂದೂರಿನ ಕೃಷ್ಣಶಾಸ್ತ್ರಿ ಪುತ್ರ ಅಶೋಕ್ ಪೂಜಾರಿ (35) ಮತ್ತು ಬೆಂಗಳೂರಿನ ಆರ್.ಆರ್.ನಗರ ವಾಸಿ ಉದಯ್ ಶಾನ್‌ಭಾಗ್ ಪತ್ನಿ ಕಸ್ತೂರಿ ಶಾನ್‌ಭಾಗ್ (64) ಸ್ಥಳದಲ್ಲೇ ಮೃತಪಟ್ಟಿರುವ ನತದೃಷ್ಟರು. ಮೃತ ಅಶೋಕ್‌ ಪೂಜಾರಿ ಅಪಘಾತಕ್ಕೀಡಾದ ಬಸ್‌ನ ಕ್ಲೀನರ್ ಆಗಿದ್ದು, ಕಸ್ತೂರಿಶಾನ್‌ಭಾಗ್ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರು.

ಬೈಂದೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಗಮ ಟೂರಿಸ್ಟ್‌ನ ಖಾಸಗಿ ಬಸ್ಸು ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಅಳವಡಿಸಿದ್ದ ಸೂಚನಾ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ರಸ್ತೆಬದಿಗೆ ಪಲ್ಟಿ ಹೊಡೆದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಒಂದು ಕೈ ತುಂಡಾಗಿದ್ದು, ಇಬ್ಬರಿಗೆ ಅಂಗೈ ತುಂಡಾಗಿದೆ. ಮತ್ತೆ ಕೆಲವರಿಗೆ ಕಾಲು ಹಾಗೂ ಕೈನ ಮೂಳೆ ಮುರಿತವಾಗಿದೆ. ಮತ್ತಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದ 20 ಮಂದಿ ಪ್ರಯಾಣಿಕರನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ಸ್ಥಳದಲ್ಲೇ ಮೃತಪಟ್ಟಿದ್ದ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್‌ಭಾಗ್ ಅವರ ಮೃತದೇಹಗಳನ್ನು ಇದೇ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಡೀಸಿ ಎಸ್ಪಿ ಭೇಟಿ ಪರಿಶೀಲನೆ:

ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ತಹಸೀಲ್ದಾರ್ ಲೆಫ್ಟಿನೆಂಟ್ ಜನರಲ್ ಡಾ.ಅಶೋಕ್, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ಹೇಮಂತ್‌ಕುಮಾರ್ ಅವರು ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಆಸ್ಪತ್ರೆಗೆ ತೆರಳಿದ ಡೀಸಿ ಎಸ್ಪಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿ, ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮರಣೋತ್ತರ ಪರೀಕ್ಷೆ ಬಳಿಕ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್‌ಭಾಗ್ ಅವರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್ ಅವರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮದ್ದೂರು: ಗಾರ್ಮೆಂಟ್ಸ್ ಗೋದಾಮಿನಲ್ಲಿ ಎಸಿ ಸ್ಫೋಟ!
ರೈತ ದೇವರಾಜು ಆತ್ಮಹತ್ಯೆ: ಪರಿಹಾರಕ್ಕೆ ಹೈಕೋರ್ಟ್‌ ನಿರ್ದೇಶನ