ಸಾಲಬಾಧೆಯಿಂದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ ‌ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಲಬಾಧೆಯಿಂದ 2022ರ ಡಿಸೆಂಬರ್ ತಿಂಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ ‌ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡುವಂತೆ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಒಂದು ತಿಂಗಳಲ್ಲಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ದೇವರಾಜು ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮೃತ ರೈತನ ಪತ್ನಿ ವಸಂತಾ, ಪುತ್ರ ಬಿ.ಡಿ. ಯಶವಂತ ಮತ್ತು ಪುತ್ರಿ ಸಿಂಚನ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಸರ್ಕಾರಕ್ಕೆ ಈ ನಿದೇರ್ಶನ ನೀಡಿತು.

ಅಲ್ಲದೆ, ಪ್ರಕರಣದಲ್ಲಿ ಪರಿಹಾರ ಪಾವತಿಸಲು ವಿಳಂಬ ಮಾಡಿದ ತಪ್ಪಿತಸ್ಥ‌ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳ ಪ್ರಯೋಜನೆ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕಂದಾಯ‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.

ಪ್ರಕರಣದ ವಿವರ:

ದೇವರಾಜು ಸಾಲಮಾಡಿ ಕೃಷಿ ಚಟುವಟಿಕೆ ನಡೆಸಿದ್ದರು. ಬೆಳೆ ನಷ್ಟ ಉಂಟಾಗಿತ್ತು.ಸಾಲಬಾಧೆ ತಾಳಲಾರದೆ 2022ರ ಡಿ.1ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತರ ಕಲ್ಯಾಣ ಪರಿಹಾರ ಯೋಜನೆಯಡಿ ತಮಗೆ ಐದು ಲಕ್ಷ ರು. ಪರಿಹಾರ ನೀಡುವಂತೆ 2023ರ ಫೆ.7ರಂದು ದೇವರಾಜು ಪತ್ನಿ ವಸಂತಾ ಅವರು ಪಾಂಡವಪುರ ಟೌನ್‌ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದರು. ಮೂರು ವರ್ಷ ಕಳೆದಿದ್ದರೂ ಪರಿಹಾರ ಮಾತ್ರ ಪರಿಹಾರ ಬಿಡುಗಡೆಯಾಗಿಲ್ಲ.

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಸಂತಾ, ಐದು ಲಕ್ಷ ರು. ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಪಾಂಡವಪುರ ಟೌನ್‌ ತಹಸೀಲ್ದಾರ್ ಮತ್ತು ಪಾಂಡವಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿದ್ದರು.