ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿ ಇರುವ ಸರ್ಕಾರಿ ಸ್ಥಳ ಮಾರಾಟಕ್ಕೆ ಯತ್ನದ ಆರೋಪದಡಿ ಮೂವರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜಿಲ್ಲೆ ವೈರ್‌ಲೆಸ್ ಜಿಲ್ಲಾ ನಿಯಂತ್ರಣ ಕೊಠಡಿ ಇನ್ಸ್‌ಪೆಕ್ಟರ್ ಹಾಗೂ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರದ ಎಂ.ಡಿ.ಹನೀಫ್, ವಿಜಯನಗರದ ರಾಜಶೇಖರ್, ಉಲ್ಲಾಳದ ಮೊಹಮ್ಮದ್ ನದೀಮ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅಂತೆಯೆ ಸಂಜಯನಗರದ ಮೋಹನ್ ಶೆಟ್ಟಿ, ಗಣಪತಿ ಹಾಗೂ ಜಹೀರ್ ಅಹಮದ್ ಎಂಬುವವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ಪ್ರಕರಣ?
ಇನ್ಸ್‌ಪೆಕ್ಟರ್ ಸಂತೋಷ್ ಗೌಡ ನೀಡಿದ ದೂರಿನ ಅನ್ವಯ, ಜೂ.3ರಂದು ಮಧ್ಯಾಹ್ನ 1ಗಂಟೆಗೆ ಕೆಲ ಅಪರಿಚಿತರು ವಸಂತನಗರದ ಮಿಲ್ಲರ್ಸ್ ರಸ್ತೆಯ ಕೇಂದ್ರ ವಲಯ ಐಜಿಪಿ ಕಚೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಕಚೇರಿ ಇರುವ ಆವರಣವನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ತಮ್ಮ ಮೊಬೈಲ್‌ನಿಂದ ಕಚೇರಿಯ ಕಟ್ಟಡ ಹಾಗೂ ಆವರಣವನ್ನು ಚಿತ್ರೀಕರಿಸಿ, ಫೋಟೋ ಸೆರೆ ಹಿಡಿಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಎಸ್ಟೇಟ್ ಆಫೀಸರ್ ಸಹ ಆಗಿರುವ ಇನ್ಸ್‌ಪೆಕ್ಟರ್ ಸಂತೋಷ್ ಗೌಡ, ಏಕೆ ಕಚೇರಿಯ ಕಟ್ಟಡ ಚಿತ್ರೀಕರಿಸುತ್ತಿರುವಿರಿ’ ಎಂದು ಪ್ರಶ್ನಿಸಿದ್ದಾರೆ.
ಸ್ವತ್ತಿನ ದಾಖಲೆಗಳು ನಮ್ಮ ಬಳಿ ಇವೆ:
ಇದಕ್ಕೆ ಆ ಅಪರಿಚಿತರು ನಮ್ಮನ್ನು ಕೇಳಲು ನೀನು ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಸಂತೋಷ್ ಗೌಡ, ನಾನು ಈ ಕಚೇರಿ ಕಟ್ಟಡ ಮತ್ತು ಆವರಣಕ್ಕೆ ಎಸ್ಟೇಟ್ ಅಧಿಕಾರಿಯಾಗಿರುವುದರಿಂದ ಪ್ರಶ್ನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ನಿಂದೇನು ಎಂದು ಮರು ಪ್ರಶ್ನೆ ಹಾಕಿದ ಅಪರಿಚಿತರು, ಈ ಸ್ವತ್ತಿನ ದಾಖಲೆಗಳು ನಮ್ಮ ಬಳಿ ಇವೆ. ನಾವು ಚಿತ್ರೀಕರಣ ಮಾಡುತ್ತೇವೆ ಎಂದಿದ್ದಾರೆ. ಸಂತೋಷ್ ಗೌಡ ಎಷ್ಟೇ ಹೇಳಿದರೂ ಅಪರಿಚಿತರು ಚಿತ್ರೀಕರಣಕ್ಕೆ ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಅಪರಿಚಿತರನ್ನು ಸಂತೋಷ್ ಗೌಡ ಕಚೇರಿಗೆ ಒಳಗೆ ಕರೆದೊಯ್ದು ಚಿತ್ರೀಕರಣದ ಬಗ್ಗೆ ಪ್ರಶ್ನೆ ಮಾಡಿದಾಗ, ಈ ಸ್ವತ್ತಿನ ಮಾಲೀಕರಾದ ಗಣಪತಿ ಮತ್ತು ಜಹೀರ್ ಎಂಬುವವರು ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನ:
ಈ ಹಿನ್ನೆಲೆಯಲ್ಲಿ ಸಂತೋಷ್ ಗೌಡ, ಆರೋಪಿಗಳು ಈ ಸ್ವತ್ತನ್ನು ಅಕ್ರಮವಾಗಿ ಮಾರಾಟ ಮಾಡುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಚೇರಿ ಆವರಣ ಅತಿಕ್ರಮ ಪ್ರವೇಶ ಮಾಡಿ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲದೆ, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.