ರಾಮನಗರ ಜೈಲಿಂದ ಬಿಡುಗಡೆ ಆಗಿ ಕೇವಲ 20 ದಿನದಲ್ಲೇ ಮತ್ತೆ ಮನೆಗಳ್ಳತನ ಮಾಡಿ ಜೈಲಿಗೆ!

KannadaprabhaNewsNetwork | Updated : Sep 04 2024, 05:37 AM IST

ಸಾರಾಂಶ

ರಾಮನಗರ ಜೈಲಿಂದ ಬಿಡುಗಡೆ ಆಗಿ ಕೇವಲ 20 ದಿನದಲ್ಲೇ ಮತ್ತೆ ಕಳ್ಳ ನಾಗರಾಜ ಕಳ್ಳತನಕ್ಕೆ ಇಳಿದು ಜೈಲು ಸೇರಿದ್ಧಾನೆ.

 ಬೆಂಗಳೂರು : ಜೈಲಿನಲ್ಲಿ ಹೊರಬಂದು 20 ದಿನದಲ್ಲೇ ಮನೆಗಳ್ಳತನ ಕೃತ್ಯ ಎಸಗಿ ಕುಖ್ಯಾತ ಖದೀಮನೊಬ್ಬ ಮತ್ತೆ ಜೈಲು ಸೇರಿದ್ದಾನೆ.

ಮೈಸೂರು ರಸ್ತೆಯ ಗುಟ್ಟಹಳ್ಳಿ ನಿವಾಸಿ ನಾಗರಾಜ ಬಂಧಿತನಾಗಿದ್ದು, ಆರೋಪಿಯಿಂದ ₹8 ಲಕ್ಷ ಮೌಲ್ಯದ 118 ಗ್ರಾಂ ಚಿನ್ನಾಭರಣ, 203 ಗ್ರಾಂ ಬೆಳ್ಳಿ ಹಾಗೂ 1 ಬೈಕ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎನ್‌ಟಿಆರ್ ಲೇಔಟ್‌ನಲ್ಲಿ ನೆಲೆಸಿರುವ ಲೇಬರ್ ಕಂಟ್ರ್ಯಾಕ್ಟರ್‌ಯೊಬ್ಬರ ಮನೆ ಬೀಗ ಮುರಿದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಮಾರತ್ತಹಳ್ಳಿ ಠಾಣೆ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಿಡಿಗೇಡಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಗರಾಜ್‌ ವೃತ್ತಿಪರ ಮನೆಗಳ್ಳನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ಮನೆಗಳ್ಳತನ ಕೃತ್ಯದಲ್ಲಿ ರಾಮನಗರ ಪೊಲೀಸರಿಗೆ ಸಿಕ್ಕಿಬಿದ್ದು ನಾಗರಾಜ ಜೈಲು ಸೇರಿದ್ದ. ಆ.8ರಂದು ಜಾಮೀನು ಪಡೆದು ರಾಮನಗರ ಜೈಲಿನಿಂದ ಹೊರಬಂದ ಆತ, ಮತ್ತೆ ತನ್ನ ಮನೆಗಳ್ಳತನ ಕೃತ್ಯಕ್ಕಿಳಿದು ಜೈಲು ಸೇರಿದ್ದಾನೆ. ಜೈಲಿನಿಂದ ಹೊರಬಂದ 20 ದಿನಗಳಲ್ಲಿ ಆನೇಕಲ್‌, ಕೋಣನಕುಂಟೆ, ಸೂರ್ಯನಗರ ಹಾಗೂ ಮಾರತ್ತಹಳ್ಳಿ ಠಾಣೆಗಳಲ್ಲಿ ಆತ ಕಳ್ಳತನ ಕೃತ್ಯಗಳನ್ನು ಎಸಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಿಟಕಿ ಪಕ್ಕ ಮಲಗಿದ್ದ ಮಹಿಳೆ ಸರ ದೋಚಿದ ರೌಡಿಯ ಸೆರೆ

ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ರೌಡಿ

 ಬೆಂಗಳೂರು :  ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ರೌಡಿಯೊಬ್ಬನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಸ್‌.ಜೆ.ಪಾರ್ಕ್‌ನ ಸೈಯದ್ ಪರ್ವೇಜ್‌ ಬಂಧಿತನಾಗಿದ್ದು, ಆರೋಪಿಯಿಂದ ₹9 ಲಕ್ಷ ಮೌಲ್ಯದ 109.8 ಗ್ರಾಂ ಚಿನ್ನದ ಸರ ಹಾಗೂ ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜೆ.ಪಿ.ನಗರದ ಮಾರೇನಹಳ್ಳಿಯಲ್ಲಿ ತಮ್ಮ ಮನೆಯಲ್ಲಿ ಕಿಟಕಿ ಪಕ್ಕದಲ್ಲಿ ಮಲಗಿದ್ದ ಗೃಹಿಣಿಯೊಬ್ಬರಿಂದ ರಾತ್ರಿ ಚಿನ್ನದ ಸರ ಕಳವು ಮಾಡಿ ಕಿಡಿಗೇಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆಗಿಳಿದ ಜೆ.ಪಿ.ನಗರ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಪರ್ವೇಜ್ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ವಿರುದ್ಧ ನಗರದ ಹಾಗೂ ಹೊರ ಜಿಲ್ಲೆಗಳಲ್ಲಿ 43 ಪ್ರಕರಣಗಳು ದಾಖಲಾಗಿವೆ. ಈ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆತನ ಮೇಲೆ ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು ರೌಡಿಪಟ್ಟಿ ತೆರೆದಿದ್ದರು. ಹೀಗಿದ್ದರೂ ಆತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article