ತನಗೆ ಹಣ ಕೊಟ್ಟವರ ‘ಮೊಬೈಲ್‌’ ಮೇಲೆ ಐಶ್ವರ್ಯಾ ಕಣ್ಣು! ಅಕ್ರಮವಾಗಿ ಸಿಡಿಆರ್‌ ಪಡೆದಿರುವುದು ಬೆಳಕಿಗೆ

KannadaprabhaNewsNetwork |  
Published : Feb 09, 2025, 01:15 AM ISTUpdated : Feb 09, 2025, 04:26 AM IST
ಐಶ್ವರ್ಯಾಗೌಡ | Kannada Prabha

ಸಾರಾಂಶ

ತನಗೆ ಹಣ ಕೊಟ್ಟವರ ಮೇಲೆ ಐಶ್ವರ್ಯಾ ಗೌಡ ನಿಗಾ ಇಟ್ಟಿದ್ದಾಳೆ. ಇದಕ್ಕಾಗಿ ಅಕ್ರಮವಾಗಿ ಪೊಲೀಸರ ಸಹಾಯದಿಂದ ಮೊಬೈಲ್‌ಗಳ ಸಿಡಿಆರ್‌ ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ವಂಚನೆ ಕೃತ್ಯಗಳ ಬೆನ್ನಲ್ಲೇ ಈಗ ತನಗೆ ಹಣ ನೀಡಿದ್ದವರ ಮೇಲೆ ನಿಗಾ ಇಡಲು ಅಕ್ರಮವಾಗಿ ಮೊಬೈಲ್ ದತ್ತಾಂಶ ಸಂಗ್ರಹ (ಸಿಡಿಆರ್‌) ಪಡೆದ ಆರೋಪ ಮೇರೆಗೆ ಐಶ್ವರ್ಯಾಗೌಡ ಹಾಗೂ ಆಕೆಗೆ ನೆರವಾದ ಪೊಲೀಸರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಂಚನೆ ಪ್ರಕರಣಗಳ ಸಂಬಂಧ ಜಪ್ತಿಯಾದ ಆಕೆಯ ಮೊಬೈಲ್‌ಗಳ ತಪಾಸಣೆ ಸಿಡಿಆರ್ ಕೃತ್ಯ ಬಯಲಾಗಿದ್ದು, ಮೋಸದ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ಅವರ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಐಶ್ವರ್ಯಾಗೌಡಳಿಗೆ ಬಂಧನ ಭೀತಿ ಶುರುವಾಗಿದೆ ಎನ್ನಲಾಗಿದೆ.

ಎಫ್‌ಐಆರ್‌ನಲ್ಲೇನಿದೆ?:

ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಚಿನ್ನದ ವ್ಯಾಪಾರಿ ವನಿತಾ ಐತಾಳ್‌ ಅ‍ವರಿಗೆ ವಂಚನೆ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖಾಧಿಕಾರಿಯಾಗಿದ್ದೇನೆ. ಐಶ್ವರ್ಯಾಗೌಡ, ಆಕೆ ಪತಿ ಕೆ.ಎನ್.ಹರೀಶ್ ಹಾಗೂ ಚಲನಚಿತ್ರ ನಟ ಬಿ.ಧರ್ಮೇಂದ್ರ ವಿರುದ್ಧ ಚಿನ್ನದ ಆಭರಣಗಳನ್ನು ಪಡೆದು ಹಣ ನೀಡದೆ ಮೋಸ ಮಾಡಿದ್ದರು. ಈ ಕೃತ್ಯಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ಹೆಸರು ಬಳಕೆಯಾಗಿತ್ತು. ಪ್ರಕರಣದ ತನಿಖಾ ಕಾಲದಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ಆರೋಪಿ ಐಶ್ವರ್ಯಾಗೌಡ ಮನೆಯಲ್ಲಿ ಆಕೆ ಬಳಸುತ್ತಿದ್ದ 5 ಮೊಬೈಲ್‌ಗಳು ಹಾಗೂ ಅವರ ಪತಿ ಹರೀಶ್‌ ಬಳಸುತ್ತಿದ್ದ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಮೊಬೈಲ್‌ಗಳನ್ನು ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್‌ ಠಾಣೆಗೆ ಮೊಬೈಲ್‌ಗಳ ಮಿರರ್ ಇಮೇಜ್ ಹಾಗೂ ಡೇಟಾ ಎಕ್ಸಾಟ್ರ್‌ಗೆ ಕಳುಹಿಸಿ ವರದಿ ಪಡೆಯಲಾಯಿತು. ಆರೋಪಿಗಳ ಮೊಬೈಲ್ ತಪಾಸಣೆ ವೇಳೆ, ಐಶ್ವರ್ಯಾಗೌಡ ಬಳಸುತ್ತಿದ್ದ 5 ಮೊಬೈಲ್‌ಗಳ ಪೈಕಿ ಒಂದು ಐಫೋನ್‌ 11 ಪ್ರೊಮ್ಯಾಕ್ಸ್‌ ಮೊಬೈಲ್‌ನಲ್ಲಿ ಖಾಸಗಿ ವ್ಯಕ್ತಿಗಳ ಸಿಡಿಆರ್‌ ಪಡೆದಿರುವುದು ಗೊತ್ತಾಗಿದೆ. ಈ ಕಾಲ್ ಡೇಟಾ ರೆಕಾರ್ಡ್‌ (ಸಿಡಿಆರ್‌) ಒಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿ ಆಗಿದ್ದು, ಅದನ್ನು ಅಪರಾಧ ಕೃತ್ಯದಲ್ಲಿ ಕೇವಲ ತನಿಖಾ ಸಂಸ್ಥೆಗಳು ಮಾತ್ರ ತನಿಖಾ ಸಮಯದಲ್ಲಿ ಪಡೆಯಬಹುದಾಗಿದೆ. ಆದರೆ ಕಾನೂನುಬಾಹಿರವಾಗಿ ತನ್ನ ಸಹಚರರೊಂದಿಗೆ ಸೇರಿಕೊಂಡು ದುರುದ್ದೇಶದಿಂದ ತನಿಖಾ ಸಂಸ್ಥೆಯೊಂದರ ಅಧಿಕಾರಿಗಳನ್ನು ಬಳಸಿಕೊಂಡು ಆಕೆ ಸಿಡಿಆರ್ ಪಡೆದಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ದೂರುದಾರ ಎಸಿಪಿ ಭರತ್ ರೆಡ್ಡಿ ವಿವರಿಸಿದ್ದಾರೆ.

ತನ್ನ ವಿರುದ್ಧ ದೂರು ಕೊಟ್ಟವರ ಮೇಲೆ ನಿಗಾ

ತನ್ನ ಸ್ವಂತ ಲಾಭಕ್ಕಾಗಿ 2021-23 ವರೆಗೆ ಎರಡು ಮೊಬೈಲ್ ಸಂಖ್ಯೆಗಳ ಹಾಗೂ 2021-2024 ವರೆಗೆ ಎರಡು ಮೊಬೈಲ್ ಸಂಖ್ಯೆಗಳು ಸೇರಿ ನಾಲ್ವರ ಸಿಡಿಆರ್ ವಿವರಗಳನ್ನು ಐಶ್ವರ್ಯಾಗೌಡ ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗೆ ಸಿಡಿಆರ್‌ ಪಡೆದವರು ಆಕೆಯ ವಿರುದ್ಧ ವಂಚನೆ ಆರೋಪದ ಮೇರೆಗೆ ದೂರು ಕೊಟ್ಟಿದ್ದ ಸಂತ್ರಸ್ತರಾಗಿದ್ದಾರೆ. ಈ ಮಾಹಿತಿ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದೂರು ಕೊಟ್ಟವರ ಚಲನವಲದ ಮೇಲೆ ಆಕೆ ಕಣ್ಗಾವಲಿಟ್ಟಿದ್ದಳು ಎಂಬ ಶಂಕೆ ಮೂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸಿಪಿ ಚಂದನ್‌ಗೆ ತನಿಖೆ ಹೊಣೆ

ಅಕ್ರಮವಾಗಿ ಸಿಡಿಆರ್‌ ಪಡೆದ ಪ್ರಕರಣದ ತನಿಖೆಯನ್ನು ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ಅವರಿಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ವಹಿಸಿದ್ದಾರೆ. ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ದೂರುದಾರರಾಗಿರುವ ಕಾರಣ ಪ್ರಕರಣವನ್ನು ವಿಜಯನಗರ ಎಸಿಪಿ ಹೆಗಲಿಗೆ ಬಿದ್ದಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ತಂಡದ ವಿರುದ್ಧ ಎಸಿಪಿ ಚಂದನೆ ತನಿಖೆ ನಡೆಸಿದ್ದರು. ಈಗ ವಂಚನೆ ಆರೋಪ ಹೊತ್ತಿರುವ ಐಶ್ವರ್ಯಾಗೌಡ ಹಾಗೂ ಆಕೆಗೆ ನೆರವಾದ ಪೊಲೀಸರ ಮೇಲಿನ ಪ್ರಕರಣದ ತನಿಖೆ ಸಾರಥ್ಯವನ್ನು ಚಂದನ್ ಅವರಿಗೆ ಡಿಸಿಪಿ ವಹಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು