ಮೀಟರ್ ಬಡ್ಡಿ ದಂಧೆ ಆರೋಪದಡಿ ದಂಪತಿ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

KannadaprabhaNewsNetwork |  
Published : Feb 09, 2025, 01:15 AM ISTUpdated : Feb 09, 2025, 04:28 AM IST
ಹಣ | Kannada Prabha

ಸಾರಾಂಶ

1.60 ಲಕ್ಷಕ್ಕೆ ₹3.80 ಲಕ್ಷ ಬಡ್ಡಿ ಕಟ್ಟಿದ್ದರೂ ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದ ದಂಪತಿ ವಿರುದ್ಧ ದೂರು ದಾಖಲಾಗಿದೆ.

  ಬೆಂಗಳೂರು : ಮಹಿಳೆಯೊಬ್ಬರು ಪಡೆದಿದ್ದ ₹1.60 ಲಕ್ಷ ಸಾಲಕ್ಕೆ ಬಡ್ಡಿ ರೂಪದಲ್ಲಿ ₹3.80 ಲಕ್ಷ ಪಾವತಿಸಿದ್ದರೂ ಮತ್ತೆ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದ ಆರೋಪದಡಿ ದಂಪತಿ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋ-ಆಪರೇಟೀವ್‌ ಡೆಪ್ಯೂಟಿ ರಿಜಿಸ್ಟ್ರಾರ್‌ ಗಂಗಾಧರ್‌ ಅವರು ನೀಡಿದ ದೂರಿನ ಮೇರೆಗೆ ಶಶೀಂದ್ರಾ ಮತ್ತು ಅಶೋಕ್‌ ದಂಪತಿ ವಿರುದ್ಧ ರಾಜ್ಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ಮತ್ತು ಅಧಿಕ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?:

ಜಯನಗರ ಸಿದ್ಧಾಪುರ ಕೆ.ಎಂ.ಕಾಲೋನಿ ನಿವಾಸಿ ಸಮ್ರೀನ್‌ ತಾಜ್‌ ಅವರು ತಂಗಿಯ ಮದುವೆ ಸಲುವಾಗಿ ಸಂಬಂಧಿ ಮೊಹಮ್ಮದ್‌ ರಫೀಕ್‌ ಸಹಾಯದಿಂದ ಶಶೀಂದ್ರಾ ಎಂಬ ಮಹಿಳೆಯಿಂದ 2021ರ ಜುಲೈನಲ್ಲಿ ಶೇ.5ರಷ್ಟು ಮಾಸಿಕ ಬಡ್ಡಿಗೆ ₹1.60 ಲಕ್ಷ ಸಾಲ ಪಡೆದಿದ್ದಾರೆ. ಸಾಲ ಪಡೆಯುವಾಗ ಸಮ್ರೀನ್‌ ಮತ್ತು ಸಂಬಂಧಿ ರಫೀಕ್‌ ಇಬ್ಬರು ತಲಾ ಒಂದು ಖಾಲಿ ಚೆಕನ್ನು ಶಶೀಂದ್ರಾಗೆ ನೀಡಿದ್ದಾರೆ. ಬಳಿಕ ಪ್ರತಿ ತಿಂಗಳು ₹8 ಸಾವಿರದಂತೆ ಒಂದೂವರೆ ವರ್ಷ ಸುಮಾರು ₹1.44 ಲಕ್ಷವನ್ನು ಶಶೀಂದ್ರಾಗೆ ನೀಡಿದ್ದಾರೆ.

ಬಳಿಕ ಸಮ್ರೀನ್‌ಗೆ ಪ್ರತಿ ತಿಂಗಳು ಸರಿಯಾಗಿ ಬಡ್ಡಿ ಕಟ್ಟಲು ಸಾಧ್ಯವಾಗದೆ ತಡವಾಗಿ ಬಡ್ಡಿ ಕಟ್ಟಿದ್ದಾರೆ. ಬಡ್ಡಿ ಕಟ್ಟುವುದು ವಿಳಂಬವಾದಾಗ ಶಶೀಂದ್ರಾ, ಸಮ್ರೀನ್‌ಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ಸಮ್ರೀನ್‌ ಅವರು ಎರಡು-ಮೂರು ಬಾರಿ ಶಶೀಂದ್ರಾ ಅವರ ಮನೆ ಬಳಿ ಹೋಗಿ ಬಡ್ಡಿ ಕಟ್ಟಲು ಆಗುತ್ತಿಲ್ಲ. ಅಸಲು ಹಣವನ್ನು ಮಾತ್ರ ಕಟ್ಟಿ ತೀರಿಸುವುದಾಗಿ ಮನವಿ ಮಾಡಿದ್ದಾರೆ. ಈ ವೇಳೆ ಶಶೀಂದ್ರಾ, ಯಾವುದೇ ಕಾರಣಕ್ಕೂ ಬಡ್ಡಿ ಬಿಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಸಮ್ರೀನ್‌ ಇನ್ನು ಮುಂದೆ ಪ್ರತಿ ತಿಂಗಳು ₹10 ಸಾವಿರ ಅಸಲು ಮತ್ತು ₹5 ಸಾವಿರ ಬಡ್ಡಿ ಸೇರಿ ₹15 ಸಾವಿರ ಕಟ್ಟುವುದಾಗಿ ಮಾತುಕತೆ ಮಾಡಿಕೊಂಡು ಬಂದಿದ್ದಾರೆ.

₹1.60 ಲಕ್ಷ ಸಾಲಕ್ಕೆ ₹3.80 ಲಕ್ಷ ಬಡ್ಡಿ!

ಅದರಂತೆ 2023ರ ನವೆಂಬರ್‌ನಿಂದ ಪ್ರತಿ ತಿಂಗಳು ₹15 ಸಾವಿರವನ್ನು ಶಶೀಂದ್ರಾಗೆ ಫೋನ್‌ ಪೇ ಮುಖಾಂತರ ಪಾವತಿಸಿದ್ದಾರೆ. 2024ರ ಮೇ 24ರ ವರೆಗೆ ಬಡ್ಡಿ ರೂಪದಲ್ಲಿ ಒಟ್ಟು ₹1.86 ಲಕ್ಷ ಪಾವತಿಸಿದ್ದಾರೆ. ಈ ನಡುವೆ ಶಶೀಂದ್ರಾ ಟ್ಯಾಕ್ಸ್‌ ಕಟ್ಟಬೇಕು ಎಂದು ಸಮ್ರೀನ್‌ ಬಳಿ ನಗದು ರೂಪದಲ್ಲಿ ₹50 ಸಾವಿರ ಪಡೆದಿದ್ದಾರೆ. ಅಂದರೆ ₹1.60 ಲಕ್ಷ ಸಾಲಕ್ಕೆ ಮೀಟರ್ ಬಡ್ಡಿ ರೂಪದಲ್ಲಿ ಒಟ್ಟು ₹3.80 ಲಕ್ಷ ಪಡೆದುಕೊಂಡಿದ್ದಾರೆ. ಬಳಿಕ ಈವರೆಗೆ ನೀನು ಕಟ್ಟಿರುವ ಹಣ ಬಡ್ಡಿಗೆ ಸರಿಯಾಗಿದೆ. ಹೀಗಾಗಿ ನೀನು ಅಸಲು ಹಣ ಕಟ್ಟಬೇಕು. ಅಸಲು ಕಟ್ಟುವವರೆಗೂ ಬಡ್ಡಿ ಕಟ್ಟಬೇಕು ಎಂದು ಸಮ್ರೀನ್‌ಗೆ ಒತ್ತಾಯಿಸಿದ್ದಾರೆ. ಈ ನಡುವೆ ಸಮ್ರೀನ್‌ ಸಾಲ ಪಡೆಯುವಾಗ ಸಂಬಂಧಿ ರಫೀಕ್‌ ನೀಡಿದ್ದ ಖಾಲಿ ಚೆಕನ್ನು ಶಶೀಂದ್ರಾ ದುರುಪಯೋಗಪಡಿಸಿಕೊಂಡು ₹4 ಲಕ್ಷ ಬರೆದುಕೊಂಡು ಬ್ಯಾಂಕ್‌ಗೆ ಹಾಕಿ ಬೌನ್ಸ್‌ ಮಾಡಿದ್ದಾರೆ.

ದಂಪತಿ ವಿರುದ್ಧ ಮೀಟರ್‌ ಬಡ್ಡಿ ದಂಧೆ ಆರೋಪ

ಶಶೀಂದ್ರಾ ಮತ್ತು ಆಕೆಯ ಪತಿ ಅಶೋಕ್‌ ಹಲವು ವರ್ಷಗಳಿಂದ ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಸಾಲ ನೀಡುವಾಗ ಭದ್ರತೆಗೆ ದಾಖಲೆಗಳನ್ನು ಪಡೆದು ಬಳಿಕ ಮೀಟರ್‌ ಬಡ್ಡಿ ವಿಧಿಸಿ, ಖಾಲಿ ಚೆಕ್‌ಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಹಲವರಿಗೆ ಯಾಮಾರಿಸಿದ್ದಾರೆ. ಲೇವಾದೇವಿ ನಡೆಸಲು ಈ ದಂಪತಿ ಯಾವುದೇ ಪರವಾನಗಿ ಪಡೆದಿಲ್ಲ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮ್ರೀನ್‌ ಕೋ-ಆಪರೇಟೀವ್‌ ಡೆಪ್ಯೂಟಿ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದಾರೆ. ಈ ಸಂಬಂಧ ಡೆಪ್ಯೂರಿ ರಿಜಿಸ್ಟ್ರಾರ್‌ ಸಿಸಿಬಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

6 ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೊಲೀಸ್ ಹಲ್ಲೆ? ಬಲವಂತದ ಸಾಕ್ಷಿ ವಿಡಿಯೋ ಚಿತ್ರಿಕರಣ
ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ