ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೆಳ್ಳೂರು ಪಟ್ಟಣದ ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಎನ್.ಕುಮಾರ್ ಅವರು ತಾಲೂಕಿನ ಚಿಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಿ.ವೀಣಾ, ಪ್ರಥಮ ದರ್ಜೆ ಸಹಾಯಕ ಸಿ.ಎನ್.ಶಿವಪ್ರಸಾದ್ ಹಾಗೂ ಕಿರಿಯ ಪ್ರಯೋಗಶಾಲಾ ತಂತ್ರಜ್ಞ ವೈ.ಎಸ್.ನಿಂಗರಾಜು ಈ ಮೂವರ ವಿರುದ್ಧ ಆರೋಗ್ಯ ಇಲಾಖೆ ಆಯುಕ್ತರು ಮತ್ತು ಮುಖ್ಯ ಜಾಗೃತಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರು ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು ಆಡಳಿತ ವೈದ್ಯಾಧಿಕಾರಿ ಡಾ.ವೀಣಾ ಮತ್ತು ಪ್ರಥಮ ದರ್ಜೆ ಸಹಾಯಕ ಸಿ.ಎನ್.ಶಿವಪ್ರಸಾದ್ ಕರ್ತವ್ಯ ಲೋಪದ ಜೊತೆಗೆ ಹಣ ದುರುಪಯೋಗ. ಕಿರಿಯ ಪ್ರಯೋಗಶಾಲಾ ತಂತ್ರಜ್ಞ ವೈ.ಎಸ್.ನಿಂಗರಾಜು ಸರ್ಕಾರಿ ನೌಕರನಾಗಿದ್ದರೂ ಸಹ ತಮ್ಮ ಹೆಸರಿನಲ್ಲಿ ಮತ್ತೊಂದು ಖಾಸಗಿ ಕಂಟ್ರಾಕ್ಟರ್ ಕಾಮಗಾರಿ ನಿರ್ವಹಿಸಿರುವ ಆರೋಪ ಕಂಡುಬಂದ ಹಿನ್ನಲೆಯಲ್ಲಿ ಈ ಮೂವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ಕೆಸಿಎಸ್‌ಆರ್ ನಿಯಮಗಳ ಪ್ರಕಾರ ಜಂಟಿ ಶಿಸ್ತು ಕ್ರಮ ಜರುಗಿಸಬೇಕೆಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದ ಚಿಣ್ಯ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ.ಜಿ.ವೀಣಾ, ಪ್ರಥಮ ದರ್ಜೆ ಸಹಾಯಕ ಸಿ.ಎನ್.ಶಿವಪ್ರಸಾದ್ ಹಾಗೂ ಕಿರಿಯ ಪ್ರಯೋಗಶಾಲಾ ತಂತ್ರಜ್ಞ ವೈ.ಎಸ್.ನಿಂಗರಾಜು ಇವರು ಸಲ್ಲಿಸಿದ್ದ ಲಿಖಿತ ಹೇಳಿಕೆ ಹಾಗೂ ದಾಖಲಾತಿಗಳನ್ನು ಪರಿಶೀಲಿಸಲಾಗಿ ಅವುಗಳನ್ನು ಸಮರ್ಥಿಸುವಂತಹ ದಾಖಲೆಗಳನ್ನು ಒದಗಿಸಲು ವಿಫಲರಾಗಿರುತ್ತಾರೆ.
ಆದ್ದರಿಂದ ಆಪಾದಿತರು ಸಲ್ಲಿಸಿರುವ ಲಿಖಿತ ಹೇಳಿಕೆ ತಿರಸ್ಕರಿಸಿ ಆರೋಪಗಳ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 13ರಡಿ ಇಲಾಖಾ ವಿಚಾರಣೆ ನಡೆಸಲು ಬೆಂಗಳೂರಿನ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಾ.ಎ.ಗುರುಮೂರ್ತಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ಮತ್ತು ಬೆಂಗಳೂರು ನಗರ ಜಿಲ್ಲೆ ಆರೋಗ್ಯಸೌಧದ ಸಹಾಯಕ ಆಡಳಿತಾಧಿಕಾರಿ ಎಸ್.ಮಂಜುನಾಥ್ ಅವರನ್ನು ಮಂಡನಾಧಿಕಾರಿ ನೇಮಿಸಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ವಿ.ಅಕ್ಕಮಹಾದೇವಿ ಅವರು ಡಿ.17ರಂದು ಆದೇಶ ಹೊರಡಿಸಿದ್ದಾರೆ.