;Resize=(412,232))
ಬೆಂಗಳೂರು : ಚಿನ್ನ ಕದ್ದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಆರನೇ ತರಗತಿ ವಿದ್ಯಾರ್ಥಿಯಾಗಿರುವ 11 ವರ್ಷದ ಬಾಲಕನ ಮೇಲೆ 120 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾನೆ ಎಂದು ಆರೋಪ ಹೊರಿಸಿ ಆತನ ಮೇಲೆ ಹಲ್ಲೆ ನಡೆಸಿ, ಚಿನ್ನ ಕದ್ದಿದ್ದು ತಾನೇ ಎಂದು ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ.
ಅಪ್ಪ ಅಮ್ಮನ ಮುಂದೆಯೇ ಠಾಣೆಯಲ್ಲಿ ಹಲ್ಲೆ ನಡೆಸಲಾಗಿದೆ. ಠಾಣೆಯಲ್ಲಿ ನಾಲ್ಕೈದು ಬಾರಿ ಲೈಟ್ ಆಪ್ ಮಾಡಿ ಬೆದರಿಸಿ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದ ಬಾಲಕನ ಕಿವಿಗೆ ಗಾಯವಾಗಿದ್ದು, ಮಗನಿಗೆ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ. ಮಗನ ಸ್ಥಿತಿ ಕಂಡು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.
ವಿನಾಯಕ ಲೇಔಟ್ ಶಾಂತಿಪುರದಲ್ಲಿ ಬಾಲಕನ ತಂದೆ ಬಾಲಾಜಿ ಲಾಂಡ್ರಿ ಶಾಪ್ ನಡೆಸುತ್ತಿದ್ದಾರೆ. ಅಂಗಡಿಯಲ್ಲಿ ಬಾಲಾಜಿ ಅವರ ಮಗ ಪೋನ್ ನೋಡುತ್ತಾ ಕುಳಿತ್ತಿದ್ದ. ಕಳೆದ ಆಗಸ್ಟ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಗೆ ಹೋಗುವಾಗ ಅಂಗಡಿಯಲ್ಲಿದ್ದ ಬಾಲಕನಿಗೆ ಹಾಗೆ ಸುಮ್ಮನೆ ₹10 ನೀಡಿದ್ದರು. ಪರಿಚಯಸ್ಥರು ಎಂಬ ಕಾರಣ ಬಾಲಕ ಹಣ ಪಡೆದು ತಮ್ಮ ಶಾಪ್ ಒಳಗೆ ಹೋಗಿದ್ದಾನೆ. ನಂತರ ಆ ಮಹಿಳೆ ತಮಿಳುನಾಡಿನ ಕೃಷ್ಣಗಿರಿಗೆ ಬಸ್ಸಿನಲ್ಲಿ ಹೋಗಿದ್ದಾರೆ.
ಆರು ದಿನಗಳ ಬಳಿಕ ವಾಪಸ್ ಬಂದ ಮಹಿಳೆ 120 ಗ್ರಾಂ ಚಿನ್ನವಿದ್ದ ಪರ್ಸ್ ಬಾಲಕನಿದ್ದ ಲಾಂಡ್ರಿ ಶಾಪ್ ಕಳುವಾಗಿದೆ. ಆ ಪರ್ಸ್ ಅನ್ನು ಇದೇ ಬಾಲಕ ಕಳ್ಳತನ ಮಾಡಿದ್ದಾನೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಬಾಲಕನನ್ನು ಠಾಣೆಗೆ ಕರೆಸಿದ ಪೋಲಿಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬಾಲಕ ಚಿನ್ನ ಕದ್ದಿಲ್ಲ ಎಂದು ಹೇಳಿದ್ದ ಹೀಗಾಗಿ ಬಾಲಕನನ್ನು ಮನೆಗೆ ಕಳುಹಿಸಿದ್ದಾರೆ. ನಂತರ ಆರು ತಿಂಗಳ ಕಾಲ ಸುಮ್ಮನಿದ್ದ ಅದೇ ಮಹಿಳೆ ಇದೀಗ ಮತ್ತೆ ಬಾಲಕನ ಮೇಲೆ ಆರೋಪ ಮಾಡಿದ್ದಾರೆ. ಹೀಗಾಗಿ ಪೋಲಿಸರು ಬಾಲಕ ಮತ್ತು ಆತನ ಪಾಲಕರನ್ನು ಠಾಣೆಗೆ ಕರೆಸಿದ್ದಾರೆ. ಠಾಣೆಯಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ವಿಡಿಯೋ ಮಾಡಿಕೊಳ್ಳಲಾಗಿದೆ.
ಚಿನ್ನವನ್ನು ತಂದು ಕೊಡದಿದ್ದರೆ ನಿಮ್ಮ ಅಪ್ಪ ಅಮ್ಮನನ್ನು 3 ವರ್ಷ ಜೈಲಿಗೆ ಹಾಕುತ್ತೇವೆ ಎಂದು ಬಾಲಕನನ್ನು ಹೆದರಿಸಿದ್ದಾರೆ. ಅಲ್ಲದೇ ಚಿನ್ನವಿದ್ದ ಪರ್ಸ್ ಅನ್ನು ಕದ್ದದ್ದು ನಾನೇ ಎಂದು ಹೇಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋವನ್ನು ಬಾಲಕನ ಪಾಲಕರಿಗೆ ತೋರಿಸಿ ನಿಮ್ಮ ಮಗನೇ ಒಪ್ಪಿಕೊಂಡಿದ್ದಾನೆ. ಮನೆಯಲ್ಲಿ ಇಟ್ಟಿರುವ ಚಿನ್ನವನ್ನು ತಂದು ಕೊಡಿ ಎಂದು ಒತ್ತಡ ಹಾಕಿದ್ದಾರೆ. ಇದರಿಂದ ಭಯಗೊಂಡಿರುವ ಬಾಲಕ ಮತ್ತು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ಬಾಲಕ ಮತ್ತು ಆತನ ಪಾಲಕರಿಗೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿರುವ ಬಾಲಕ ಮತ್ತು ಆತನ ಪಾಲಕರು ನಮ್ಮ ಮಗನ ಮೇಲೆ ಬಂದಿರುವ ಆರೋಪ ಸುಳ್ಳಾಗಿದ್ದು, ಪೊಲೀಸರ ಕಿರುಕುಳದಿಂದ ನಮ್ಮನ್ನು ಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ತನಿಖೆ ನಡೆಸುವಂತೆ ಎಸಿಪಿಗೆ ಸೂಚಿಸಿರುವುದಾಗಿ ವೈಟ್‌ಫಿಲ್ಡ್ ವಿಭಾಗದ ಡಿಸಿಪಿ ನಾರಾಯಣ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.