ಕಳ್ಳತನ ಪ್ರಕರಣ: ೩೪ ಲಕ್ಷ ರು. ಮೌಲ್ಯದ ವಸ್ತುಗಳ ವಶ

KannadaprabhaNewsNetwork |  
Published : Feb 03, 2026, 01:30 AM IST
೨ಕೆಎಂಎನ್‌ಡಿ-೩ಮಳವಳ್ಳಿ ತಾಲೂಕಿನ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ಜೊತೆ ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಎಎಸ್‌ಪಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್ ಇತರರಿದ್ದರು. | Kannada Prabha

ಸಾರಾಂಶ

ಮಳವಳ್ಳಿಯಲ್ಲಿ ಪ್ರತ್ಯೇಕವಾಗಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ಮಂದಿ ಆರೋಪಿಗಳನ್ನು ಬಂಧಿಸಿ, ೧೯ ಬೈಕ್‌ಗಳು ಹಾಗೂ ಚಿನ್ನಾಭರಣ ಸೇರಿದಂತೆ ಸುಮಾರು ೩೪ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿಯಲ್ಲಿ ಪ್ರತ್ಯೇಕವಾಗಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ಮಂದಿ ಆರೋಪಿಗಳನ್ನು ಬಂಧಿಸಿ, ೧೯ ಬೈಕ್‌ಗಳು ಹಾಗೂ ಚಿನ್ನಾಭರಣ ಸೇರಿದಂತೆ ಸುಮಾರು ೩೪ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.

ಮೈಸೂರು ತಾಲೂಕು ಕಾಮನಕೆರೆ ಹುಂಡಿ ಗ್ರಾಮದ ಕಾರ್ತಿಕ್ (೨೩), ಮಳವಳ್ಳಿ ತಾಲೂಕು ಬಾಣಸಮುದ್ರ ಗ್ರಾಮದ ಸಾಗರ್‌ (೨೩) ಮತ್ತು ಮಳವಳ್ಳಿ ಪಟ್ಟಣದ ಪ್ರಜ್ವಲ್ (೨೩) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ಜ.೯ರಂದು ಮಳವಳ್ಳಿ ಸಾರಿಗೆ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಟ್ಟಣ ಪೊಲೀಸರು, ಜ.೧೮ರಂದು ಸಂಜೆ ಮಳವಳ್ಳಿ ಪಟ್ಟಣದಲ್ಲಿಯೇ ಬಂಧಿಸಿ ವಿಚಾರಣೆಗೊಳಪಡಿಸಿದಾಗ ವಿವಿಧ ಕಂಪನಿಗೆ ಸೇರಿದ ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧೦, ಕೊಳ್ಳೇಗಾಲ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯಲ್ಲಿ ತಲಾ ಎರಡು ಪ್ರಕರಣ, ಕಿರುಗಾವಲಿನಲ್ಲಿ ಒಂದು, ಮಂಡ್ಯ ಪೂರ್ವ ಠಾಣೆಯಲ್ಲಿ ಎರಡು, ಮೈಸೂರು ಸಿಟಿ, ಮಳವಳ್ಳಿ ಟೌನ್ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು ೧೯ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ಏಳು ಲಕ್ಷ ರು. ಎಂದು ಮಾಹಿತಿ ನೀಡಿದರು.

ಈ ಮೂವರು ಹಿಂದೆ ಬಾರ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಿಚಯವಾದವರು. ನಂತರ ಐಷಾರಾಮಿ ಜೀವನಕ್ಕಾಗಿ ಬೈಕ್ ಕಳ್ಳತನಕ್ಕಿಳಿದಿದ್ದರು. ಕಳವು ಮಾಡಿದ ಬೈಕ್‌ಗಳನ್ನು ಅಡವಿಟ್ಟು ಹಣ ಪಡೆದುಕೊಳ್ಳುತ್ತಿದ್ದರು. ಈ ರೀತಿ ಅಡವಿಟ್ಟುಕೊಂಡಿದ್ದವರಿಂದ ಪೊಲೀಸರು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪತ್ತೆ ಮಾಡಿದ ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್ ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಮಳವಳ್ಳಿ ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಶಿವಲಿಂಗ ದಳವಾಯಿ, ಎಎಸ್‌ಐಗಳಾದ ಸುರೇಶ್, ಗೋಪಾಲ್, ಸಿಬ್ಬಂದಿ ಮಾದೇಶ್, ಮಹದೇವಸ್ವಾಮಿ, ಹರ್ಷವರ್ಧನ್, ಪ್ರಭುಸ್ವಾಮಿ, ರಿಯಾಜ್‌ಪಾಷ, ವಿಕಾಸ್, ಶ್ರೀನಿವಾಸ್, ಮಧುಕಿರಣ್ ತಂಡವನ್ನು ಅಭಿನಂದಿಸಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಶಿವಲಿಂಗ ದಳವಾಯಿ ಇತರರಿದ್ದರು.ದೇವಸ್ಥಾನಕ್ಕೆ ಕನ್ನ ಹಾಕುತ್ತಿದ್ದ ಆರು ಮಂದಿ ಬಂಧನ

ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಚಿಂದಿ ಹಾಯುವ ಹಾಗೂ ಪಾತ್ರೆ ರಿಪೇರಿ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಆರು ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್‌ಪಿ ಡಾ.ವಿ.ಜೆ.ಶೋಭಾರಾಣಿ ಅವರು ತಿಳಿಸಿದರು.

ಜ.೧೬ರಂದು ಮಳವಳ್ಳಿ ತಾಲ್ಲೂಕು ಸಾಗ್ಯ ಸರಗೂರು ಗ್ರಾಮದ ಶ್ರೀಪಟ್ಟಲದಮ್ಮ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಸರ, ರೇಷ್ಮೆ ಸೀರೆ, ಹುಂಡಿ ಹಣ ದೋಚಲಾಗಿತ್ತು. ಈ ಸಂಬಂಧ ಹಲಗೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಸಿದಂತೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ತಮಿಳುನಾಡು ಮೂಲದ ವಿಜಯ್ (೪೬) ಮತ್ತು ಮಣಿ (೩೫), ಕನಕಪುರ ತಾಲ್ಲೂಕು ಸಾತನೂರು ಕಾಲೋನಿಯ ಮಧುರ (೨೨), ಮಾಯಪ್ಪನಹಳ್ಳಿಯ ಭರತ್ (೨೧), ರಾಮನಗರ ನವೀನ್ (೨೧), ಮೈಸೂರು ನಗರದ ಶಬ್ಬೀರ್ (೨೮) ಎಂಬುವರನ್ನು ಜ.೧೭ರಂದು ಕನಕಪುರ ತಾಲ್ಲೂಕು ಸಾತನೂರು ದೇವಸ್ಥಾನದ ಬಳಿ ಬಂಧಿಸಲಾಗಿದೆ ಎಂದರು.

ಆರೋಪಿಗಳೆಲ್ಲರೂ ಬೇರೆ ಬೇರೆ ಕಡೆಯವರಾಗಿದ್ದರೂ ಚಿಂದಿ ಹಾಯುವ ಕೆಲಸ ಮಾಡುತ್ತಿದ್ದಾಗ ಜೊತೆಯಾಗಿದ್ದಾರೆ. ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಇವರು ಬೆಳಕವಾಡಿ, ಕೆ.ಎಂ.ದೊಡ್ಡಿ, ಮಳವಳ್ಳಿ ಟೌನ್, ಸಾತನೂರು, ಕನಕಪುರ ಹಾಗೂ ತಮಿಳುನಾಡು, ಅಂಚೆಹಟ್ಟಿ, ಧರ್ಮಪುರಿ, ಕೃಷ್ಣಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರಿಂದ ೭,೧೭,೮೪೪ ರೂ ಮೌಲ್ಯದ ೨೪ ಗ್ರಾಂ ತೂಕದ ಚಿನ್ನಾಭರಣ, ೨೪೫ ಗ್ರಾಂ ತೂಕದ ಬೆಳ್ಳಿಯ ಒಡವೆ, ಎರಡು ಜತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, ಐದು ಘಂಟೆ, ಹುಂಡಿಯಲ್ಲಿ ದೋಚಿದ್ದ ೫,೦೯೪ ರು.ಗಳು, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಬೈಕ್, ಗೂಡ್ಸ್ ಆಟೋ, ಎರಡು ಕಬ್ಬಿಣದ ರಾಡ್ ಜತೆಗೆ ಕಳ್ಳತನ ಮಾಡಿದ್ದ ಎರಡು ಮೇಕೆಯನ್ನು ಮಾರಾಟ ಮಾಡಿದ್ದ ೧೨ ಸಾವಿರ ರು. ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ ಎಸ್ಪಿ, ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಲೋಕೇಶ್, ಸಿಬ್ಬಂದಿ ರಿಯಾಜ್ ಪಾಷಾ, ಪ್ರಭುಸ್ವಾಮಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಮೋಹನ್‌ಕುಮಾರ್, ರಫೀಕ್, ನದಾಫ್‌ ಅವರನ್ನು ಅಭಿನಂದಿಸಿದರು.

೨೦ ಲಕ್ಷ ರು. ಮೌಲ್ಯದ ಚಿನ್ನ, ಬೆಳ್ಳಿ ವಶ

ಮಳವಳ್ಳಿ ಪಟ್ಟಣದಲ್ಲಿ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಕಾರ್ಯಕ್ರಮ ನೋಡಲು ಗಂಗಾಧರ್ ಎಂಬುವರು ಕಳೆದ ಡಿ.೧೭ರಂದು ಕುಟುಂಬ ಸಮೇತ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರು ನಗರದ ಬಾಬಾಜಾನ್ (೩೭) ಹಾಗೂ ಈತನ ೧೬ ವರ್ಷದ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದು ೧೪೪೦ ಗ್ರಾಂ ತೂಕದ ಚಿನ್ನ ಹಾಗೂ ೪೬ ಗ್ರಾಂ ತೂಕದ ಕಾಲು ಚೈನ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ೨೦ ಲಕ್ಷ ರು.ಗಳಾಗಿದೆ ಎಂದು ಎಸ್ಪಿ ಡಾ.ಶೋಭಾರಾಣಿ ಹೇಳಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಟಿಪ್ಪರ್ ಲಾರಿಗೆ ಕಾರು ಡಿಕ್ಕಿ: ಅಕ್ಕ-ತಮ್ಮ ಸ್ಥಳದಲ್ಲೇ ಸಾವು; ಮೂವರಿಗೆ ಗಾಯ