2.57 ಕೋಟಿಯೊಂದಿಗೆ ಖಾಸಗಿ ಕಂಪನಿ ನೌಕರ ಪರಾರಿ!

KannadaprabhaNewsNetwork |  
Published : Mar 31, 2024, 02:00 AM ISTUpdated : Mar 31, 2024, 05:32 AM IST
ಸಾಂದರ್ಭಿಕ | Kannada Prabha

ಸಾರಾಂಶ

ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ನಿಗದಿತ ಬ್ಯಾಂಕ್‌ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ನೌಕರನೊಬ್ಬ ಬ್ಯಾಂಕ್‌ಗೆ ಹಣ ಪಾವತಿಸದೇ 2.57 ಕೋಟಿ ರು. ಹಣದೊಂದಿಗೆ ಪರಾರಿಯಾಗಿರುವ ಘಟನೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ನಿಗದಿತ ಬ್ಯಾಂಕ್‌ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ನೌಕರನೊಬ್ಬ ಬ್ಯಾಂಕ್‌ಗೆ ಹಣ ಪಾವತಿಸದೇ 2.57 ಕೋಟಿ ರು. ಹಣದೊಂದಿಗೆ ಪರಾರಿಯಾಗಿರುವ ಘಟನೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾ.25ರಂದು ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯ ಫೆಡರಲ್‌ ಬ್ಯಾಂಕ್‌ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ‘ಹಿಟಾಚಿ ಕ್ಯಾಶ್‌ ಮ್ಯಾನೇಜ್‌ಮೆಂಟ್‌ ಪ್ರೈವೆಟ್‌ ಲಿಮಿಟೆಡ್‌’ ಕಂಪನಿ ಮಾಲಿಕ ಮಲ್ಲಿಕಾರ್ಜುನ್‌ ನೀಡಿದ ದೂರಿನ ಮೇರೆಗೆ ಕಂಪನಿ ನೌಕರ ಸುಮನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:ದೂರುದಾರ ಮಲ್ಲಿಕಾರ್ಜುನ್‌ ಅವರು ಹಿಟಾಚಿ ಕ್ಯಾಶ್‌ ಮ್ಯಾನೇಜ್‌ಮೆಂಟ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಹೊಂದಿದ್ದಾರೆ. ಈ ಕಂಪನಿಯೊಂದಿಗೆ ನೋಂದಣಿ ಮಾಡಿಕೊಂಡ ಗ್ರಾಹಕರಿಂದ ಹಣವನ್ನು ಸ್ವೀಕರಿಸಿ ನಿಗದಿತ ಬ್ಯಾಂಕ್‌ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿ ಪಡೆದಿದ್ದಾರೆ. ಅದರಂತೆ ನಗರದ ಮಾರ್ಗ ಸಂಖ್ಯೆ ‘ಬಿಎಲ್‌ಆರ್‌ 15’ರಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಲು ಕಂಪನಿ ನೌಕರ ಸುಮನ್‌ ಎಂಬಾತನನ್ನು ಕಸ್ಟೋಡಿಯನ್‌, ಬೋಲನಾಥದಾಸ್‌ ಎಂಬುವರನ್ನು ಗಾರ್ಡ್‌ ಹಾಗೂ ಫಜಲ್‌ ಹುಸೇನ್‌ನನ್ನು ವಾಹನದ ಚಾಲಕನಾಗಿ ನೇಮಿಸಿದ್ದರು.

ಮಾ.25ರಂದು ಸುಮನ್‌ ಸದರಿ ಮಾರ್ಗದಲ್ಲಿ ಕಂಪನಿಯ ವಿವಿಧ ಗ್ರಾಹಕರಿಂದ 2.84 ಕೋಟಿ ರು. ಹಣವನ್ನು ಸಂಗ್ರಹಿಸಿದ್ದು, ಈ ಪೈಕಿ 23.10 ಲಕ್ಷ ರು. ಹಣವನ್ನು ರಿಚ್‌ಮಂಡ್‌ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದ. ನಂತರ ದೊಮ್ಮಲೂರಿನ ಕಚೇರಿಗೆ 4.35 ಲಕ್ಷ ರು. ಜಮೆ ಮಾಡಿದ್ದಾನೆ.

ಉಳಿದ 2.57 ಕೋಟಿ ರು. ಹಣವನ್ನು ಸೇಂಟ್‌ ಮಾರ್ಕ್ಸ್‌ ರಸ್ತೆಯ ಫೆಡರಲ್‌ ಬ್ಯಾಂಕ್‌ಗೆ ಜಮೆ ಮಾಡಬೇಕಿತ್ತು. ಅದರಂತೆ ವಾಹನದೊಂದಿಗೆ ಫೆಡರಲ್‌ ಬ್ಯಾಂಕ್‌ ಬಳಿ ಬಂದಿರುವ ಸುಮನ್‌, ಬ್ಯಾಂಕಿಗೆ ಹಣ ಜಮೆ ಮಾಡಿ ಬರುವುದಾಗಿ ತನ್ನ ಜತೆಗೆ ಇದ್ದ ಸಿಬ್ಬಂದಿಯಾದ ಬೋಲನಾಥದಾಸ್‌ ಮತ್ತು ವಾಹನದ ಚಾಲಕ ಫಜಲ್‌ ಹುಸೇನ್‌ ತಿಳಿಸಿ ಹಣದ ಬಾಕ್ಸ್‌ ಹಿಡಿದುಕೊಂಡು ಬ್ಯಾಂಕ್‌ ಪ್ರವೇಶಿಸಿದ್ದು, ಅಲ್ಲಿಂದ ಸುಳ್ಳು ಹೇಳಿ ಪರಾರಿಯಾಗಿದ್ದಾನೆ.

 

ಸಾವಿನ ಕಥೆ ಕಟ್ಟಿ ಹಣದೊಂದಿಗೆ ಎಸ್ಕೇಪ್‌!

ಬಳಿಕ ಸ್ವಲ್ಪ ಸಮಯದ ಬಳಿಕ ಗಾರ್ಡ್‌ ಬೋಲನಾಥ್‌ಗೆ ಕರೆ ಮಾಡಿರುವ ಸುಮನ್‌, ‘ನನ್ನ ಕುಟುಂಬದ ಸದಸ್ಯರೊಬ್ಬರು ಮೃಪಟ್ಟಿದ್ದಾರೆ. ನಾನು ಬ್ಯಾಂಕ್‌ಗೆ ಹಣ ಪಾವತಿಸಿ ಇಲ್ಲಿಂದಲೇ ಮನೆಗೆ ತೆರಳುತ್ತೇನೆ. ಈ ಬಗ್ಗೆ ನಾನು ಕಂಪನಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ. ನೀವು ವಾಹನ ತೆಗೆದುಕೊಂಡು ಕಂಪನಿಗೆ ತೆರಳಿ’ ಎಂದು ತಿಳಿಸಿದ್ದಾನೆ. ಈತನ ಮಾತು ನಂಬಿದ ಗಾರ್ಡ್‌ ಮತ್ತು ವಾಹನದ ಚಾಲಕ ಕಂಪನಿಗೆ ತೆರಳಿದ್ದಾರೆ.

ಕಂಪನಿಯಲ್ಲಿ ಸುಮನ್‌ ಬಗ್ಗೆ ವಿಚಾರಿಸಿದಾಗ ಆತ ಸುಳ್ಳು ಹೇಳಿ ಹಣದೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ. ಬಳಿಕ ಕಂಪನಿ ಮಾಲಿಕ ಮಲ್ಲಿಕಾರ್ಜುನ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುಮನ್‌ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು