ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ವಿಜ್ಞಾನ ನಗರ ನಿವಾಸಿ ಹಾಗೂ ನಿವೃತ್ತ ನೌಕಾ ಕ್ಯಾಪ್ಟನ್ ನವೀನ್ ಚಂದ್ರ ಭಟ್‌ (60) ಮತ್ತು ಇವರ ಪತ್ನಿ ದಂತ ವೈದ್ಯೆ ಶ್ಯಾಮಲಾ ಭಟ್ (55) ಕೊಲೆಯಾದವರು. ಕೃತ್ಯ ಎಸಗಿದ ಪುತ್ರ ರೋಹನ್‌ ಚಂದ್ರ ಭಟ್ (32) ಎಂಬಾತನನ್ನು ಬಂಧಿಸಲಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ಕಿಯಾಗಿದ್ದ ಆರೋಪಿ:

ನವೀನ್ ಚಂದ್ರ ಭಟ್‌ ಮತ್ತು ಡಾ.ಶ್ಯಾಮಲಾ ಭಟ್ ಸುಮಾರು 35 ವರ್ಷಗಳಿಂದ ಪುತ್ರ ರೋಹನ್‌ ಜತೆ ಬಸವನಗರದಲ್ಲಿ ವಾಸವಾಗಿದ್ದರು. ರೋಹನ್‌ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಕೌಟುಂಬಿಕ ವಿಚಾರಕ್ಕೆ ತನ್ನ ತಂದೆ-ತಾಯಿ ಜತೆ ಕೆಲ ದಿನಗಳಿಂದ ರೋಹನ್‌ ಜಗಳ ಮಾಡುತ್ತಿದ್ದ. ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮತ್ತೆ ಪಾಲಕರ ಜತೆ ಜಗಳ ತೆಗೆದ ಆರೋಪಿ ಮಗ, ಇಬ್ಬರನ್ನು ಭೀಕರವಾಗಿ ಇರಿದು ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮತ್ತೊಂದೆಡೆ ರೋಹನ್‌ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಆದರೆ, ಭೀಕರ ಹತ್ಯೆಯ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಲಾಗಿದೆ. ಮೃತ ದೇಹಗಳನ್ನು ಬೌರಿಂಗ್ ಆಸ್ಪತ್ರಯಲ್ಲಿರುವ ಶವಗಾರದಲ್ಲಿ ಇರಿಸಿದ್ದು, ಮೃತರ ಮಗಳು ಅಮೆರಿಕಾದಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ಮಾಡಲಾಗುವುದು. ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಹಣಕ್ಕಾಗಿ ಪೀಡಿಸಿದ್ದ ಮಗ!

ಆರೋಪಿ ರೋಹನ್‌ ಅಮೆರಿಕಾದ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿ ಕಳೆದ 3 ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ. ಅವಿವಾಹಿತನಾಗಿದ್ದು, ವರ್ತೂರಿನ ಮನೆಯೊಂದರಲ್ಲಿ ಪ್ರತ್ಯೇಕವಾಗಿ ವಾಸವಿದ್ದ. ಸ್ವಂತ ಸಾಫ್ಟ್‌ವೇರ್‌ ಬಿಸಿನೆಸ್‌ ಮಾಡಲು ತಂದೆ-ತಾಯಿಯ ಬಳಿ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದ. ಆದರೆ, ಹಣ ಕೊಡಲು ನಿರಾಕರಿಸಿದ್ದರಿಂದ ಆಗಾಗ ತಂದೆ-ತಾಯಿ ಜೊತೆ ಜಗಳ ಮಾಡುತ್ತಿದ್ದ. ಬುಧವಾರವೂ ಹಣಕ್ಕೆ ಪೀಡಿಸಿದಾಗ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಆಗ ಕೋಪಗೊಂಡ ಪಾಲಕರು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಕ್ಕೆ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಇರಿದು ಕೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.