ಪಟ್ಟಣ ಸಮೀಪದ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ೧೦ರ ವೇಳೆಗೆ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಅಪರಿಚಿತರು ಓರ್ವನನ್ನು ಹತ್ಯೆಗೈದ ಘಟನೆ ನಡೆದಿದೆ.
ಜ್ಯೋತಿಷಿ ಕಮಲಾಕರ ಗುರೂಜಿ ಸೇರಿ ಒಟ್ಟು ಏಳು ಜನರ ಬಂಧನಕನ್ನಡಪ್ರಭ ವಾರ್ತೆ ಸಿದ್ದಾಪುರ
ಪಟ್ಟಣ ಸಮೀಪದ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ೧೦ರ ವೇಳೆಗೆ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಅಪರಿಚಿತರು ಓರ್ವನನ್ನು ಹತ್ಯೆಗೈದ ಘಟನೆ ನಡೆದಿದೆ.ವಸಂತ ಜಟ್ಯಾ ನಾಯ್ಕ (೪೩) ಮೃತರು.
ಇವರ ಸಹೋದರ ಮಹೇಶ ನಾಯ್ಕ ಹಾಗೂ ಜಗಳ ಬಿಡಿಸಲು ಬಂದ ಕುಮಾರ ನಾರಾಯಣ ನಾಯ್ಕ (೩೫) ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.ಈ ಕುರಿತು ಮೃತ ವಸಂತ ಪತ್ನಿ ಸಂಧ್ಯಾ ನಾಯ್ಕ ಸೋಮವಾರ ರಾತ್ರಿ ದೂರು ನೀಡಿದ್ದು ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಮೊದಲ ಆರೋಪಿ ಸುಚಿತ್ರಾ ನಾಯ್ಕ ಸೇರಿದಂತೆ ಜ್ಯೋತಿಷಿ ಕಮಲಾಕರ ಗುರೂಜಿ, ಸುಚಿತ್ರಾಳ ತಂದೆ ಏಕನಾಥ ನಾಯ್ಕ ಹೊಸೂರು ಹಾಗೂ ಶಿವಮೊಗ್ಗ ಮೂಲದ ನಾಲ್ವರು ಅಪರಿಚಿತ ಹಂತಕರನ್ನು ಬಂಧಿಸಿದ್ದಾರೆ.
ಘಟನೆ: ಅವರಗುಪ್ಪದ ಮಹೇಶ ನಾಯ್ಕ ಕಳೆದ ೨೦ ವರ್ಷಗಳ ಹಿಂದೆ ಪಟ್ಟಣದ ಹೊಸೂರಿನ ಸುಚಿತ್ರಾ ನಾಯ್ಕರನ್ನು ವಿವಾಹವಾಗಿದ್ದು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಳ್ಳಟ್ಟೆ ಸಮೀಪ ಮನೆ ಕಟ್ಟಿಕೊಂಡಿದ್ದ ಮಹೇಶ ನಾಯ್ಕರನ್ನು ತೊರೆದು ಸುಚಿತ್ರಾ ಕೆಲವು ತಿಂಗಳುಗಳ ಹಿಂದೆ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಶಿವಮೊಗ್ಗದ ಕಮಲಾಕರ ಗುರೂಜಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಹೇಶ ನಾಯ್ಕ ಅಣ್ಣನ ಜೊತೆ ಅವರಗುಪ್ಪದಲ್ಲಿ ವಾಸವಾಗಿದ್ದ.ಶಿವಮೊಗ್ಗದಲ್ಲಿ ಸುಚಿತ್ರಾ ಜೊತೆಗಿದ್ದ ಮಗಳು ಸುಮಶ್ರೀ, ಸುಚಿತ್ರಾ ಹಾಗೂ ಕಮಲಾಕರ ಗುರೂಜಿ ಅನೈತಿಕ ಸಂಬಂಧ ಹಾಗೂ ಅವರು ನೀಡುತ್ತಿದ್ದ ಹಿಂಸೆ ತಾಳದೇ ತಂದೆಗೆ ಮಾಹಿತಿ ನೀಡಿದಾಗ ಆತ ಅವರಗುಪ್ಪಕ್ಕೆ ಬರುವಂತೆ ತಿಳಿಸಿದ್ದ. ಆ ಪ್ರಕಾರ ಫೆ.೧ರಂದು ಬಂದ ಸುಮಶ್ರೀಯನ್ನು ಮಹೇಶ ನಾಯ್ಕ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿ ನೀಡಿದ ಮಾರ್ಗದರ್ಶನದ ಮೇರೆಗೆ ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಹೋಗಿ ಮಾಹಿತಿ ನೀಡಿದ್ದರು.
ಸುಮಶ್ರೀ ಅವರಗುಪ್ಪಕ್ಕೆ ಬಂದ ಮಾಹಿತಿ ತಿಳಿದ ಸುಚಿತ್ರಾ, ಕಮಲಾಕರ ಗುರೂಜಿ ಹಾಗೂ ಏಕನಾಥ ನಾಯ್ಕ ಶಿವಮೊಗ್ಗದ ನಾಲ್ವರು ಅನ್ಯ ವ್ಯಕ್ತಿಗಳೊಂದಿಗೆ ಸೋಮವಾರ ರಾತ್ರಿ ೯.೩೦ರ ವೇಳೆಗೆ ಮಹೇಶ ನಾಯ್ಕರ ಮನೆಗೆ ನುಗ್ಗಿ ಸುಮಶ್ರೀಯನ್ನು ಕರೆದೊಯ್ಯಲು ಯತ್ನಿಸಿದ್ದಾರೆ.ಆಗ ವಾಗ್ವಾದ, ತಳ್ಳಾಟ ನಡೆದಿದ್ದು, ಗಲಾಟೆ ಕೇಳಿ ಬಂದ ಪಕ್ಕದ ಮನೆಯ ಕುಮಾರ ನಾಯ್ಕ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅನ್ಯ ವ್ಯಕ್ತಿಯೊಬ್ಬ ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮಹೇಶ ನಾಯ್ಕನಿಗೂ ಚಾಕುವಿನಿಂದ ಇರಿಯಲಾಗಿದೆ. ಅಷ್ಟಾದ ನಂತರ ಆರೋಪಿಗಳು ಬಂದಿದ್ದ ಇನ್ನೊವಾ ಕಾರಿನ ಬಳಿ ವಸಂತ ನಾಯ್ಕ ಬಂದಾಗ ಆತನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಅಷ್ಟರಲ್ಲಾಗಲೇ ಗಲಾಟೆ ಕೇಳಿ ಬಂದ ಜನರು ಸುಚಿತ್ರಾ, ಏಕನಾಥ ನಾಯ್ಕ ಹಾಗೂ ಓರ್ವ ಅನ್ಯ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡಿದ್ದು ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣ ಮೂವರನ್ನು ಖಾಸಗಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದಾಗ ವಸಂತ ನಾಯ್ಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್.ಪಿ. ದೀಪನ್ ಎಂ.ಎನ್. ಪತ್ರಕರ್ತರೊಂದಿಗೆ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿ ೭ ಮಂದಿ ಆರೋಪಿಗಳನ್ನು ಬಂಧಿಸಿದ್ದು ಇದು ಪೂರ್ವಯೋಜಿತ ಕೃತ್ಯ ಆಗಿರುವ ಸಾಧ್ಯತೆಯೂ ಸೇರಿ ಎಲ್ಲ ಹಂತದಲ್ಲೂ ತನಿಖೆ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಗಳು ಶಿವಮೊಗ್ಗದವರು ಎನ್ನುವ ಮಾಹಿತಿ ದೊರಕಿದ್ದು ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೃತರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ ಎಂದರು.ಐಜಿಪಿ ಅಮಿತ ಸಿಂಗ್, ಅಡಿಷನಲ್ ಎಸ್ಪಿ ಜಗದೀಶ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳದಲ್ಲಿದ್ದಾರೆ.