ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾಲಗಾರರ ಕಾಟ ತಾಳಲಾರದೆ ರೈತನೋರ್ವ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಗ್ರಾಮದ ಲಿಂಗರಾಜು (48) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ ಭಾರತಿ, ಪುತ್ರಿ ಚಂದ್ರಿಕಾ, ಪುತ್ರ ಮಹದೇವು ಇದ್ದಾರೆ. ಮೃತ ಲಿಂಗರಾಜು ಅವರಿಗೆ ಒಂದು ಎಕರೆ ಜಮೀನಿದ್ದು, ಮಗಳ ಮದುವೆಗೆಂದು ಖಾಸಗಿಯಾಗಿ 8 ಲಕ್ಷ ರು. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 6 ಗಂಟೆ ಸಮಯದಲ್ಲಿ ಜಮೀನಿಗೆ ನೀರು ಹಾಯಿಸುವುದಾಗಿ ಹೇಳಿ ಹೋದವರು ರಾತ್ರಿ 9 ಗಂಟೆಯಾದರೂ ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮಗ ಮಹದೇವು ಹುಡುಕಿಕೊಂಡು ಹೋದಾಗ, ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಮೃತ ಲಿಂಗರಾಜು ಅವರ ಪತ್ನಿ ಭಾರತಿ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಚಿರತೆ ದಾಳಿಗೆ ಕರು ಬಲಿಕನ್ನಡಪ್ರಭ ವಾರ್ತೆ ಮಳವಳ್ಳಿ
ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವೊಂದು ಬಲಿಯಾಗಿರುವ ಘಟನೆ ತಾಲೂಕಿನ ಕೋರೇಗಾಲ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಗೆಂಡೆಕರಿಯಯ್ಯ ಎಂಬುವವರಿಗೆ ಸೇರಿದ ಕರುವನ್ನು ಗ್ರಾಮದೊಳಗೆ ನುಗ್ಗಿರುವ ಚಿರತೆ ದಾಳಿ ನಡೆಸಿ ಹಿಂಬದಿ ಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಇದರಿಂದ ಭಯಗೊಂಡಿರುವ ಗ್ರಾಮಸ್ಥರು ಕಾಡುಪ್ರಾಣಿಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಚಿರತೆ ಹಾವಳಿ ಹೆಚ್ಚಾಗಿದೆ. ಸಾಕುನಾಯಿ, ಹಸು, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯರ ಮೇಲೆ ದಾಳಿ ನಡೆಯುತ್ತಿರುವ ಪ್ರಕರಣಗಳಿಂದ ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಲು ಭಯ ಪಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚಿರತೆಗಳನ್ನು ಹಿಡಿದು ದೂರದ ಕಾಡುಗಳಿಗೆ ಬಿಡಬೇಕೆಂದು ಆಗ್ರಹಿಸಿದ್ದಾರೆ.