ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ನಂಬಿಸಿದ ಬಂಗಾರಿ ಗೌಡ್ತಿ ವಿರುದ್ಧ ಮತ್ತೊಂದು ಕೇಸ್‌

KannadaprabhaNewsNetwork |  
Published : Dec 27, 2024, 02:17 AM ISTUpdated : Dec 27, 2024, 04:37 AM IST
KSRP

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ನಂಬಿಸಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣದ ಆರೋಪಿ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ) ವಿರುದ್ಧ ಈ ಹಿಂದೆ ದಾಖಲಾಗಿದ್ದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ನಂಬಿಸಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣದ ಆರೋಪಿ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ) ವಿರುದ್ಧ ಈ ಹಿಂದೆ ದಾಖಲಾಗಿದ್ದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ವೈದ್ಯ ದಂಪತಿಗೆ ಸೆಕೆಂಡ್‌ ಹ್ಯಾಂಡ್‌ ಐಷಾರಾಮಿ ಕಾರು ಕೊಡಿಸುವುದಾಗಿ 6.2 ಕೋಟಿ ರು. ಪಡೆದು ವಂಚಿಸಿದ ಆರೋಪದಡಿ ಬಂಗಾರಿ ಗೌಡ ವಿರುದ್ಧ ಕಳೆದ ಫೆಬ್ರವರಿಯಲ್ಲಿ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ಈ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.

ಏನಿದು ವಂಚನೆ ಪ್ರಕರಣ?

ದೂರುದಾರ ವಿಜಯನಗರ ನಿವಾಸಿ ಡಾ.ಗಿರೀಶ್‌ ಮತ್ತು ಅವರ ಪತ್ನಿ ಡಾ.ಮಂಜುಳಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. 2022ನೇ ಸಾಲಿನಲ್ಲಿ ಬಂಗಾರಿ ಗೌಡ ಕಾಸ್ಮಿಟಿಕ್‌ ಸರ್ಜರಿ ಮಾಡಿಸಲು ಆಸ್ಪತ್ರೆಗೆ ಬಂದಿದ್ದಾಗ ಡಾ.ಗಿರೀಶ್‌ ದಂಪತಿಗೆ ಪರಿಚಿತರಾಗಿದ್ದಾರೆ. ಈ ವೇಳೆ ನಾನು ರಿಯಲ್‌ ಎಸ್ಟೇಟ್‌, ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದೇನೆ. ಜತೆಗೆ ಐಷಾರಾಮಿ ಸೆಕೆಂಡ್‌ ಹ್ಯಾಂಡ್ ಕಾರುಗಳ ವ್ಯವಹಾರ ಸಹ ಮಾಡುತ್ತಿದ್ದೇನೆ ಎಂದು ಬಂಗಾರಿ ಗೌಡ ಹೇಳಿಕೊಂಡಿದ್ದಾರೆ.

ಇದೇ ಸಮಯಕ್ಕೆ ಐಷಾರಾಮಿ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಡಾ.ಗಿರೀಶ್‌ ದಂಪತಿ ಯೋಚಿಸಿದ್ದು, ಈ ವಿಚಾರವನ್ನು ಬಂಗಾರಿ ಗೌಡ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಸೆಕೆಂಡ್‌ ಹ್ಯಾಂಡ್‌ ಐಷಾರಾಮಿ ಕಾರು ಕೊಡಿಸುವುದಾಗಿ ಬಂಗಾರಿ ಗೌಡ ಹೇಳಿದ್ದಾರೆ. ಈಕೆಯ ಮಾತು ನಂಬಿದ ಡಾ.ಗಿರೀಶ್‌, ಮೊದಲಿಗೆ ಆನ್‌ಲೈನ್‌ ಮುಖಾಂತರ 2.75 ಕೋಟಿ ರು. ಮತ್ತು 3.25 ಕೋಟಿ ರು. ನಗದು ಹಣವನ್ನು ಬಂಗಾರಿ ಗೌಡಗೆ ನೀಡಿದ್ದಾರೆ. ಬಳಿಕ ಬಂಗಾರಿ ಗೌಡ ಕಾರು ಕೊಡಿಸದೆ ಸಬೂಬು ಹೇಳಿ ಮೋಸ ಮಾಡಿದ್ದಾರೆ.

ಹಣ ವಾಪಸ್ ಕೇಳಿದ್ದಕ್ಕೆ ಅತ್ಯಾಚಾರ ಕೇಸ್‌ ಬೆದರಿಕೆ:

ಡಾ.ಗಿರೀಶ್‌ ಅವರು 2023ರ ಡಿಸೆಂಬರ್‌ನಲ್ಲಿ ಬಂಗಾರಿ ಗೌಡಗೆ ಕರೆ ಮಾಡಿ ಹಣ ವಾಪಾಸ್ ನೀಡುವಂತೆ ಕೇಳಿದಾಗ, ವಿಜಯನಗರ ಕ್ಲಬ್‌ ಬಳಿ ಬರುವಂತೆ ಆಕೆ ಕರೆದಿದ್ದಾರೆ. ಅದರಂತೆ ಡಾ.ಗಿರೀಶ್‌ ದಂಪತಿ ವಿಜಯನಗರ ಕ್ಲಬ್‌ಗೆ ತೆರಳಿ ಹಣ ವಾಪಾಸ್‌ ನೀಡುವಂತೆ ಕೇಳಿದ್ದಾರೆ. ಈ ವೇಳೆ ಬಂಗಾರಿ ಗೌಡ ಏಕಾಏಕಿ ದಂಪತಿಯನ್ನು ನಿಂದಿಸಿದ್ದು, ಹಣ ಕೇಳಿದರೆ, ನಿಮ್ಮ ವಿರುದ್ಧ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಮಾಧ್ಯಮಗಳ ಎದುರು ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಬಿಡಬೇಕಾದರೆ, 5 ಲಕ್ಷ ರು. ಹಣ ಕೊಡಬೇಕು ಎಂದು ಬೇಡಿಕೆ ಇರಿಸಿ, ಡಾ.ಗಿರೀಶ್‌ ಅವರಿಂದ 2 ಲಕ್ಷ ರು. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೇಸ್‌ಗೆ ಹೈಕೋರ್ಟ್‌ ತಡೆಯಾಜ್ಞೆ:

ಬಂಗಾರಿ ಗೌಡ ನನಗೆ ಒಟ್ಟು 6.2 ಕೋಟಿ ರು. ಹಣ ಪಡೆದು ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ಗಿರೀಶ್‌ ಅವರು ಕಳೆದ ಫೆಬ್ರವರಿಯಲ್ಲಿ ವಿಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ನಡುವೆ ಹೈಕೋರ್ಟ್‌ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮಹಾ ಪೊಲೀಸರಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆ!
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು