ಕ್ಯಾಂಟರ್‌ಗೆ ಆಪೆ ಆಟೋ ಡಿಕ್ಕಿ: ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಸಾವು

KannadaprabhaNewsNetwork |  
Published : May 25, 2026, 01:45 AM IST
24ಕೆಎಂಎನ್ ಡಿ14 | Kannada Prabha

ಸಾರಾಂಶ

ಹಾಲು ಸಾಗಾಣಿಕೆ ಕ್ಯಾಂಟರ್‌ಗೆ ಆಪೆ ಆಟೋ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಮೃತಪಟ್ಟು, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಶನಿವಾರ ರಾತ್ರಿ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಾಲು ಸಾಗಾಣಿಕೆ ಕ್ಯಾಂಟರ್‌ಗೆ ಆಪೆ ಆಟೋ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಮೃತಪಟ್ಟು, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಶನಿವಾರ ರಾತ್ರಿ ಜರುಗಿದೆ.

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ (27) ಮೃತಪಟ್ಟವರು. ಅಪಘಾತದಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಅರುಣ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ.

ಆಪೆ ಆಟೋ ಚಾಲಕ ಅನಿಲ್ ಕುಮಾರ್ ಗಾಯಗೊಂಡಿದ್ದು, ಈತನಿಗೆ ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲತಃ ಮದ್ದೂರು ತಾಲೂಕು ಆತಗೂರು ಹೋಬಳಿಯ ತೊರೆಶೆಟ್ಟಿಹಳ್ಳಿ ಬಲರಾಮ ಪುತ್ರ ಅರುಣ್ ಕುಮಾರ ಕಂಪನಿಗೆ ಎರಡು ದಿನ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಶನಿವಾರ ಸಂಜೆ ಸ್ನೇಹಿತ ಆಟೋ ಚಾಲಕ ಅನಿಲ್ ಕುಮಾರ್ ಜೊತೆ ಮಂಡ್ಯಕ್ಕೆ ತೆರಳಿ ಆಟೋದಲ್ಲಿ ವಾಪಸ್ ಬರುತ್ತಿದ್ದಾಗ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಸರ್ವಿಸ್ ರಸ್ತೆಯಲ್ಲಿ ರಾತ್ರಿ 9:30 ಸುಮಾರಿಗೆ ಮುಂದೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಗೆ ಆಟೋ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲುಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾವಿನ ಹಣ್ಣು ಕೀಳುವಾಗ ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು

ಕನ್ನಡಪ್ರಭ ವಾರ್ತೆ ಮಂಡ್ಯಮಾವಿನ ಹಣ್ಣುಗಳನ್ನು ಕೀಳುವ ಸಮಯದಲ್ಲಿ ಮಾವಿನ ಮರರದ ಕೊಂಬೆಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣದಲ್ಲಿ ನಡೆದಿದೆ.

ಬೆಳ್ಳೂರು ಪಟ್ಟಣ ನಿವಾಸಿ ನೂರ್ ಅಹಮದ್ (೫೨) ಮೃತ ವ್ಯಕ್ತಿ. ಶನಿವಾರ ಬೆಳಗ್ಗೆ ೧೧ ಗಂಟೆ ಸಮಯದಲ್ಲಿ ನೂರ್ ಅಹಮದ್ ಅವರು ಶಫಿ ಕುಶನ್ ವರ್ಕ್ಸ್ ಅಂಗಡಿ ಮುಂದೆ ಇರುವ ರಸ್ತೆ ಪಕ್ಕದ ಜಮೀನಿನಲ್ಲಿ ಮಾವಿನ ಹಣ್ಣುಗಳನ್ನು ಕೀಳಲು ಹೋಗಿದ್ದರು. ಮರ ಹತ್ತಿ ಮಾವಿನ ಹಣ್ಣುಗಳನ್ನು ಕೀಳುತ್ತಿರುವಾಗ ಮರದ ಕೊಂಬೆ ಗಾಳಿ ಬಂದಿದ್ದರಿಂದ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಾಕಿದೆ. ವಿದ್ಯುತ್ ಸ್ಪರ್ಶಕ್ಕೊಳಗಾಗಿ ನೂರ್ ಅಹಮದ್ ಮರದಿಂದ ಕೆಳಗೆ ಬಿದ್ದರು. ತಕ್ಷಣ ಅಲ್ಲೇ ಅಂಗಡಿ ಮುಂದೆ ಇದ್ದವರು ಸ್ಥಳಕ್ಕೆ ಹೋಗಿ ನೋಡಿದಾಗ ನೂರ್ ಅಹಮದ್ ಕೈ-ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆಟೋವೊಂದರಲ್ಲಿ ಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಆತ ಸಾವನ್ನಪ್ಪಿರುವ ವಿಷಯ ತಿಳಿಯಿತು. ಸೈಯದ್ ಮಾಚ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ: ಇಬ್ಬರ ಬಂಧನ
ನಕಲಿ ಚಿನ್ನ ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗೆ ನಾಮ ಹಾಕಿದ ಖದೀಮರು