)
ಕನ್ನಡಪ್ರಭ ವಾರ್ತೆ ಬೆಂಗಳೂರು
ವರ್ತೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖಾ ವ್ಯವಸ್ಥಾಪಕ ಎಸ್.ಎನ್.ಆದರ್ಶ್ ನೀಡಿದ ದೂರಿನ ಅನ್ವಯ ಬ್ಯಾಂಕ್‌ನ ಚಿನ್ನ ಮೌಲ್ಯಮಾಪಕ ರವಿಕುಮಾರ್, ಆತನ ಸಹಚರರಾದ ಮೋಹನ್ ರೆಡ್ಡಿ, ಕೇಶವ ಮತ್ತು ಮಹದೇಶ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇರೆ ಮೌಲ್ಯಮಾಪಕನಿಂದ ಬೆಳಕಿಗೆ:ಆರೋಪಿಗಳ ಪೈಕಿ ರವಿಕುಮಾರ್ ಬ್ಯಾಂಕ್ ವರ್ತೂರು ಶಾಖೆಯಲ್ಲಿ ಮೂರು ವರ್ಷಗಳಿಂದ ಚಿನ್ನ ಮೌಲ್ಯಮಾಪಕನಾಗಿ ಕೆಲಸ ಮಾಡುತ್ತಿದ್ದು, ಆತ ಮೋಹನ್ ರೆಡ್ಡಿ, ಕೇಶವ ಮತ್ತು ಮಹದೇಶ್‌ಗೆ ಕಮಿಷನ್ ಆಸೆ ತೋರಿಸಿ ನಕಲಿ ಚಿನ್ನಾಭರಣಗಳನ್ನು ಅವರಿಬ್ಬರ ಹೆಸರಿನಲ್ಲಿ ಅಡಮಾನ ಇರಿಸಿ ಲಕ್ಷಾಂತರ ರು. ಸಾಲ ಪಡೆಯುತ್ತಿದ್ದ. ಬಳಿಕ ಅವರಿಗೆ ಇಂತಿಷ್ಟು ಕಮಿಷನ್ ಹಣ ನೀಡುತ್ತಿದ್ದ. ಈ ಮಧ್ಯೆ ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆ ಬೇರೊಬ್ಬ ಚಿನ್ನ ಮೌಲ್ಯಮಾಪಕನ ಮೂಲಕ ಚಿನ್ನಾಭರಣ ಪರಿಶೀಲಿಸಿದ್ದಾಗ ಮೋಹನ್ ರೆಡ್ಡಿ ಹೆಸರನಲ್ಲಿರುವ ಚಿನ್ನಾಭರಣಗಳು ನಕಲಿ ಎಂಬುದು ಗೊತ್ತಾಗಿದೆ. ಹಾಗೆಯೇ ಬೇರೆ ಶಾಖೆಗಳಲ್ಲಿ ಪರಿಶೀಲಿಸಿದಾಗ ಮೋಹನ್ ರೆಡ್ಡಿ, ಕೇಶವ ಮತ್ತು ಮಹದೇಶ್ ಹೆಸರಿನಲ್ಲಿ ಅಡಮಾನ ಇರಿಸಿರುವ ಚಿನ್ನಾಭರಣಗಳು ಕೂಡ ನಕಲಿ ಎಂಬುದು ಗೊತ್ತಾಗಿದೆ.