ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಗುಂಡು ಹಾರಿಸಿ ಕೊಲೆಗೆ ಯತ್ನ:ಬಿಗ್‌ಬಾಸ್ ವಕೀಲ ಜಗದೀಶ್‌ ಬಂಧನ

KannadaprabhaNewsNetwork | Updated : Jan 26 2025, 04:30 AM IST

ಸಾರಾಂಶ

ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಆರೋಪದಡಿ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ‘ವಕೀಲ’ ಕೆ.ಎನ್‌.ಜಗದೀಶ್‌, ಆತನ ಪುತ್ರ ಸೇರಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಬೇಕರಿ ಬಳಿ ಟೀ ಕುಡಿಯುತ್ತಾ ನಿಂತಿದ್ದ ಯುವಕರ ಮೇಲೆ ಲಾಠಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಆರೋಪದಡಿ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ‘ವಕೀಲ’ ಕೆ.ಎನ್‌.ಜಗದೀಶ್‌, ಆತನ ಪುತ್ರ ಸೇರಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಡಿಗೇಹಳ್ಳಿಯ ವಿರೂಪಾಕ್ಷಪುರ ನಿವಾಸಿ ಕೆ.ಎನ್.ಜಗದೀಶ್, ಆತನ ಪುತ್ರ ಆರ್ಯ ಜಗದೀಶ್, ಗನ್‌ಮ್ಯಾನ್ ಅಭಿಷೇಕ್ ತಿವಾರಿ ಮತ್ತು ಕಾರು ಚಾಲಕ ಶುಭಂ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಕೊಡಿಗೇಹಳ್ಳಿ ನಿವಾಸಿ ಎನ್‌.ತೇಜಸ್ವಿ ನೀಡಿದ ದೂರಿನ ಮೇರೆಗೆ ಕೊಲೆಗೆ ಯತ್ನ, ನಿಂದನೆ, ಹಲ್ಲೆ, ಶಸ್ತ್ರಾಸ್ತ್ರ ಬಳಕೆ ಹಾಗೂ ಇತರೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ:

ತೇಜಸ್ವಿ ನೀಡಿದ ದೂರಿನ ಅನ್ವಯ, ತೇಜಸ್ವಿ ಹಾಗೂ ಸ್ನೇಹಿತರು ಜ.24ರಂದು ರಾತ್ರಿ ಸುಮಾರು 8.30ಕ್ಕೆ ವಿರೂಪಾಕ್ಷಪುರದ ಆರ್ಚ್‌ ಹತ್ತಿರದ ಬೇಕರಿ ಬಳಿ ಟೀ ಕುಡಿಯುತ್ತಾ ನಿಂತಿದ್ದರು. ಆಗ ಜಗದೀಶ್‌ ಹಾಗೂ ಸಹಚರರು ಅಲ್ಲಿಗೆ ಬಂದಿದ್ದು, ಏಕೆ ಇಲ್ಲಿ ನಿಂತಿರುವಿರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತೇಜಸ್ವಿ, ಟೀ ಕುಡಿದು ಹೋಗುವುದಾಗಿ ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಜಗದೀಶ್‌, ಡ್ರಗ್ಸ್‌ ಸೇವಿಸಿ ಬಂದಿದ್ದೀರಾ ಎಂದು ಏಕಾಏಕಿ ಬಾಡಿ ಗಾರ್ಡ್‌ನಿಂದ ಲಾಠಿ ಪಡೆದು ಅವರ ಹಲ್ಲೆ ಮಾಡಿದ್ದು, ಜಗಳ ಬಿಡಿಸಲು ಬಂದ ಸ್ಥಳೀಯರ ಮೇಲೂ ಜಗದೀಶ್‌ ಸಹಚರರು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾರು ಹತ್ತಿಸಿ ಹತ್ಯೆಗೆ ಯತ್ನ:

ಜಗಳ ವಿಕೋಪಕ್ಕೆ ತಿರುಗಿದಾಗ ಜಗದೀಶ್‌, ಪಿಸ್ತೂಲ್‌ ತೆಗೆದು ತೇಜಸ್ವಿ ಮೇಲೆ ಗುಂಡು ಹಾರಿಸುವಂತೆ ಗನ್‌ಮ್ಯಾನ್‌ಗೆ ಸೂಚಿಸಿದ್ದಾರೆ. ಈ ವೇಳೆ ಗನ್‌ ಮ್ಯಾನ್‌ ತೇಜಸ್ವಿಯತ್ತ ಗುರಿ ಇರಿಸಿ ಗುಂಡು ಹಾರಿಸಿದ್ದು, ಗುರಿ ತಪ್ಪಿ ತೇಜಸ್ವಿ ತಲೆ ಮೇಲೆ ಹಾದು ಹೋಗಿದೆ. ಬಳಿಕ ಜಗದೀಶ್‌ ಹಾಗೂ ಸಹಚರರು ತಮ್ಮ ಕಾರನ್ನು ತೇಜಸ್ವಿ ಹಾಗೂ ಸ್ನೇಹಿತರ ಮೇಲೆ ಹತ್ತಿಸಲು ಮುಂದಾದಾಗ ಎಲ್ಲರೂ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಸ್ಥಳೀಯರಿಂದ ಜಗದೀಶ್‌ ಮೇಲೆ ಹಲ್ಲೆ

ಜಗದೀಶ್‌ ಹಾಗೂ ಸಹಚರರ ವರ್ತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಜಗದೀಶ್ ಹಾಗೂ ಸಹಚರರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಜಗದೀಶ್‌ನ ಸ್ಕಾರ್ಪಿಯೋ ಕಾರಿನ ಮೇಲೆ ದೊಣ್ಣೆಗಳಿಂದ ಬಡಿದು ಜಖಂಗೊಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿದರೂ ಕೋಪೋದ್ರಿಕ್ತ ಜನರ ಗುಂಪು ಕಾರಿನ ಗಾಜುಗಳನ್ನು ಪುಡಿಗಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜ.23ರಂದು ಸಹ ರಸ್ತೆಯಲ್ಲಿ ಪೆಂಡಾಲ್‌ ಹಾಕಿ ಅಣ್ಣಮ್ಮದೇವಿ ಕೂರಿಸುವ ವಿಚಾರ ಸಂಬಂಧ ವಕೀಲ ಜಗದೀಶ್‌ ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಆಗಲೂ ಸಹ ಕೆಲ ಯುವಕರು ಜಗದೀಶ್‌ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.

Share this article