ಜ್ಯೋತಿಷ್ಯದ ಪ್ರಕಾರ ನಿಮ್ಮ ಗಂಡನಿಗೆ ಗಂಡಾಂತರವಿದೆ ಎಂದು ಮಹಿಳೆಯರನ್ನು ಹೆದರಿಸಿ, ಅವರಿಗೆ ಮಾದಕ ವಸ್ತುಗಳನ್ನು ನೀಡಿ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಖದೀಮ ಜ್ಯೋತಿಷಿಯೊಬ್ಬನನ್ನು ಮಹಾರಾಷ್ಟ್ರದ ನಾಸಿಕ್‌ನ ಪೊಲೀಸರು ಬಂಧಿಸಿದ್ದಾರೆ.
ನಾಸಿಕ್: ಜ್ಯೋತಿಷ್ಯದ ಪ್ರಕಾರ ನಿಮ್ಮ ಗಂಡನಿಗೆ ಗಂಡಾಂತರವಿದೆ ಎಂದು ಮಹಿಳೆಯರನ್ನು ಹೆದರಿಸಿ, ಅವರಿಗೆ ಮಾದಕ ವಸ್ತುಗಳನ್ನು ನೀಡಿ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಖದೀಮ ಜ್ಯೋತಿಷಿಯೊಬ್ಬನನ್ನು ಮಹಾರಾಷ್ಟ್ರದ ನಾಸಿಕ್‌ನ ಪೊಲೀಸರು ಬಂಧಿಸಿದ್ದಾರೆ.
ಈತ ಮಹಿಳೆಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, 50ಕ್ಕೂ ಹೆಚ್ಚು ಸ್ತ್ರೀಯರ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತನ ರಾಸಲೀಲೆಯ 58 ವಿಡಿಯೋಗಳು ಕೂಡ ಪತ್ತೆಯಾಗಿವೆ.
ಅಶೋಕ್ ಖಾರತ್ (67) ಬಂಧಿತ. ಈತ ಕೋಟ್ಯಂತರ ರು. ಆಸ್ತಿ ಮಾಡಿದ್ದಲ್ಲದೆ, ದೆಹಲಿಯಿಂದ ಮಹಾರಾಷ್ಟ್ರದವರೆಗೂ ರಾಜಕೀಯ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಎನ್ನಲಾಗಿದೆ.
ಯಾರೀತ?:
ಅಶೋಕ್ 20 ವರ್ಷಗಳ ಕಾಲ ವಾಣಿಜ್ಯ ಹಡಗಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದ. ಆ ಬಳಿಕ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯವನ್ನು ಅಧ್ಯಯನ ಮಾಡಿ, ಆ ಮೂಲಕ ಜನರ ಸಂಪರ್ಕ ಬೆಳೆಸಿದ್ದ. ಶ್ರೀಮಂತ ವ್ಯಕ್ತಿಗಳ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ಪೀಕುತ್ತಿದ್ದ. ತನ್ನ ಬಳಿ ಜ್ಯೋತಿಷ್ಯ ಕೇಳಲು ಬರುತ್ತಿದ್ದ ಮಹಿಳೆಯರಿಗೆ, ಅವರ ಗಂಡನಿಗೆ ಸಮಸ್ಯೆಯಾಗುವುದಾಗಿ ಹೆದರಿಸಿ, ಮಾದಕ ವಸ್ತುಗಳನ್ನು ನೀಡಿ ಅತ್ಯಾಚಾರ ನಡೆಸುತ್ತಿದ್ದ. ಕಚೇರಿಯಲ್ಲಿ ಗೌಪ್ತ ಸಿಸಿಟೀವಿ ಕ್ಯಾಮೆರಾವನ್ನು ಅಳವಡಿಸಿ, ತನ್ನ ಅಶ್ಲೀಲ ಚಟುವಟಿಕೆಗಳನ್ನು ಸೆರೆಹಿಡಿಯುತ್ತಿದ್ದ ಎಂದು ತಿಳಿದುಬಂದಿದೆ. 35 ವರ್ಷದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಈತನ ಇನ್ನೊಂದು ಮುಖ ಬಯಲಾಗಿದೆ. 58 ಸ್ತ್ರೀಯರ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಇರುವ ಪೆನ್‌ಡ್ರೈವ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರತಿ ಭೇಟಿಗೆ 50 ಲಕ್ಷ ರು. ಬೇಡಿಕೆ!:
ಖಾರತ್ ಯಾರದ್ದೇ ಮನೆ ಅಥವಾ ಕಚೇರಿಗೆ ಭೇಟಿ ನೀಡಲು 50 ಲಕ್ಷ ರು. ವಿಧಿಸುತ್ತಿದ್ದ. ನಾಸಿಕ್‌ನ ದುಬಾರಿ ಕೆನಡಾ ಕಾರ್ನರ್ ಪ್ರದೇಶದಲ್ಲಿ ಓಕಸ್ ಪ್ರಾಪರ್ಟಿ ಡೀಲರ್ಸ್ ಮತ್ತು ಡೆವಲಪರ್ಸ್ ಎಂಬ ಕಚೇರಿ ಹೊಂದಿದ್ದ. ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ನಿರ್ಮಿಸಿದ್ದ ಈ ಕಚೇರಿ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ಅಲ್ಲದೆ, ನಾಸಿಕ್ ಮತ್ತು ಶಿರಡಿಯಲ್ಲಿ ನೂರಾರು ಎಕರೆ ಜಾಗ ಮತ್ತು ಆಸ್ತಿಯನ್ನು ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಸಾಮಾನ್ಯ ನೌಕಾಧಿಕಾರಿಯೊಬ್ಬ ಕೋಟ್ಯಧೀಶನಾಗಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜಕೀಯ ಜಟಾಪಟಿ:
ಖಾರತ್‌ನ ಬಂಧನ ಮಹಾರಾಷ್ಟ್ರ ರಾಜಕೀಯದಲ್ಲಿ ವಾದ ಪ್ರತಿವಾದದ ವಿಷಯವಾಗಿದೆ. ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಈತನನ್ನು ಸಂಪರ್ಕಿಸಿದ ಮಾಹಿತಿ ದೊರಕಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಉದ್ಧವ್ ಠಾಕ್ರೆ ಪಕ್ಷದ ಸುಷ್ಮಾ ಅಂಧಾರೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜ್ಯೋತಿಷಿ ಕರಾಳ ಕೃತ್ಯ
- ಅಶೋಕ್ 20 ವರ್ಷಗಳ ಕಾಲ ವಾಣಿಜ್ಯ ಹಡಗಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದ
- ಬಳಿಕ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಅಧ್ಯಯನ ಮಾಡಿ ಜ್ಯೋತಿಷ್ಯ ವೃತ್ತಿ ಕೈಗೊಂಡಿದ್ದ
- ಜನರ ಸಂಪರ್ಕ ಬೆಳೆಸಿದ್ದ, ಮಹಾರಾಷ್ಟ್ರ ರಾಜಕಾರಣಿಗಳ ಸ್ನೇಹವನ್ನೂ ಗಳಿಸಿದ್ದ
- ಶ್ರೀಮಂತರಿಂದ ಕೋಟಿಗಟ್ಟಲೆ ಹಣ ಪೀಕಿದ್ದ, ಪ್ರತಿ ಮನೆ ಭೇಟಿಗೆ ₹50 ಲಕ್ಷ ಕೇಳುತ್ತಿದ್ದ
- ಗಂಡನಿಗೆ ಸಮಸ್ಯೆ ಇದೆ ಎಂದು ಮಹಿಳೆಯರ ಹೆದರಿಸಿ, ಡ್ರಗ್ಸ್ ನೀಡಿ ರೇಪ್ ಮಾಡ್ತಿದ್ದ
- ಇತ್ತೀಚೆಗೆ 35 ವರ್ಷದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಈತನ ಬಣ್ಣ ಬಯಲು
