ಕನ್ನಡಪ್ರಭ ವಾರ್ತೆ ಮದ್ದೂರು

ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ಕಾರು ಉರುಳಿ ಬಿದ್ದು ದಂಪತಿ ಸೇರಿದಂತೆ ಇಬ್ಬರ ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ಸಂಜೆ ಜರುಗಿದೆ. ಮಡಿಕೇರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವೈರ್ಲೆಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೆರವೆಂಡ ತಿಮ್ಮಯ್ಯ, ಈತನ ಪತ್ನಿ ಕಾವ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಇವರ ಮಕ್ಕಳಾದ ಮೋಹಿತ್ ಮತ್ತು ಮೋಹಿಕ್ ಅವರುಗಳಿಗೆ ಸಣ್ಣಪುಟ್ಟ ಗಾಯವಾಗಿದೆ.

ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿಮ್ಮಯ್ಯ ಹಾಗೂ ಪತ್ನಿ ಕಾವ್ಯ ಅವರುಗಳನ್ನುತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.ದಂಪತಿಗಳು ತಮ್ಮ ಮಕ್ಕಳ ಸಮೇತ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಗೆಜ್ಜಲಗೆರೆ ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಿಮ್ಮಯ್ಯ ಚಾಲನೆ ಮಾಡುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಕ್ಯಾಂಟರ್ ಅನ್ನು ಓವರ್ ಟೇಕ್ ಮಾಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಮೈಸೂರು ಮಾರ್ಗದ ರಸ್ತೆಗೆ ಬಿದ್ದು ಅಪಘಾತ ಸಂಭವಿಸಿದೆ.

ಅಪಘಾತದಿಂದಾಗಿ ಬೆಂಗಳೂರು ಮೈಸೂರಿನ ಹೆದ್ದಾರಿಯಲ್ಲಿ ಹಲವು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಅಪಘಾತಕೀಡಾದ ವಾಹನಗಳನ್ನು ರಸ್ತೆಯಿಂದ ತೆರೆವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.