ಇತ್ತೀಚೆಗೆ ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದ್ದ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ತನ್ನ ತಂಗಿಯನ್ನು ಚುಡಾಯಿಸಿದ್ದಕ್ಕಾಗಿ ಕುಪಿತಗೊಂಡು ಸ್ನೇಹಿತನನ್ನು ಕೊಲೆ ಮಾಡಿದ್ದಾಗಿ ಆರೋಪಿ ಅಜಯ್‌ ಬಾಯಿ ಒಪ್ಪಿಕೊಂಡಿದ್ದಾನೆ.

- ಪಾನಮತ್ತರಾಗಿ ಸ್ನೇಹಿತರ ಮಧ್ಯೆ ಶುರುವಾದ ವಾಗ್ವಾದ ಕೊಲೆಯಲ್ಲಿ ಅಂತ್ಯ

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇತ್ತೀಚೆಗೆ ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದ್ದ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ತನ್ನ ತಂಗಿಯನ್ನು ಚುಡಾಯಿಸಿದ್ದಕ್ಕಾಗಿ ಕುಪಿತಗೊಂಡು ಸ್ನೇಹಿತನನ್ನು ಕೊಲೆ ಮಾಡಿದ್ದಾಗಿ ಆರೋಪಿ ಅಜಯ್‌ ಬಾಯಿ ಒಪ್ಪಿಕೊಂಡಿದ್ದಾನೆ.

ಮಾ.11ರಂದು ಪಟ್ಟಣದ ದೊಡ್ಡಕೆರೆ ಬಳಿ ತಾಲೂಕಿನ ಮೂಖಹಳ್ಳಿ ಗ್ರಾಮದ ಯುವಕ ನಂಜುಂಡಸ್ವಾಮಿ (22) ಮೃತ ದೇಹ ಪತ್ತೆಯಾಗಿತ್ತು.

ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.ಮೃತ ನಂಜುಂಡಸ್ವಾಮಿಯು ಆರೋಪಿ ಅಜಯ್‌ನ ತಂಗಿಯ ಮೇಲೆ ಕಣ್ಣುಹಾಕಿದ್ದ. ಜೊತೆಗೆ ಆಕೆಯನ್ನು ಪದೇ ಪದೇ ಚುಡಾಯಿಸುತ್ತಿದ್ದ. ತನ್ನ ಅಣ್ಣನ ಸೋದರ ಈ ರೀತಿಯ ಕಿರುಕುಳ ನೀಡುತ್ತಿದ್ದನ್ನು ತಂಗಿಯು ಅಜಯ್‌ಗೆ ಹೇಳಿಕೊಂಡಿದ್ದಾಳೆ. ಇದರಿಂದ ಅಜಯ್‌ ಆಕ್ರೋಶಗೊಂಡಿದ್ದಾನೆ. ನಂತರ ಅಜಯ್‌ ತನ್ನ ಸಹೋದರಿಯ ಗಂಡ ರಾಘವಾಪುರ ಗ್ರಾಮದ ನಂದೀಶ್‌ ಜೊತೆ ಮಾತನಾಡಿ ನಂಜುಂಡಸ್ವಾಮಿಗೆ ಬುದ್ಧಿವಾದ ಹೇಳೋಣ ಬನ್ನಿ ಎಂದು ಗುಂಡ್ಲುಪೇಟೆಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಎಣ್ಣೆ ಹೊಡೆಯೋಣ ಬಾ ಎಂದು ಆಹ್ವಾನ:

ಕೃತ್ಯ ಎಸಗುವುದಕ್ಕೂ ಮುನ್ನ ಆರೋಪಿಯು ನಂಜುಂಡಸ್ವಾಮಿಗೆ ಕರೆ ಮಾಡಿ ‘ತುಂಬಾ ದಿನವಾಗಿದೆ ಎಣ್ಣೆ ಹೊಡೆಯೋಣ ಬಾ’ ಎಂದು ದೊಡ್ಡಕೆರೆ ಬಳಿಗೆ ಕರೆಸಿಕೊಂಡಿದ್ದಾನೆ. ಜೊತೆಗೆ ನಂದೀಶ್‌ಗೆ ನೀವು ಹಿಂಬಾಲಿಸಿ ಎಂದು ಹೇಳಿದ್ದಾನೆ.

ನಂದೀಶ್‌ ತನ್ನ ಸ್ನೇಹಿತ ಕಿರಣ್‌ ಜೊತೆಗೆ ಗುಂಡ್ಲುಪೇಟೆ ದೊಡ್ಡಕೆರೆ ಬಳಿಗೆ ಬಂದು ನಿಂತಿದ್ದಾನೆ. ಅಜಯ್‌ ಮತ್ತು ನಂಜುಂಡಸ್ವಾಮಿ ಬೈಕ್‌ನಲ್ಲಿ ಹೋಗುತ್ತಿದ್ದನ್ನು ಕಂಡ ನಂದೀಶ್‌ ಮತ್ತು ಸ್ನೇಹಿತ ಕಿರಣ್‌, ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ.

ದೊಡ್ಡಕೆರೆ ಬಳಿ ಅಜಯ್ ಮತ್ತು ನಂಜುಂಡಸ್ವಾಮಿ ಪಾನಮತ್ತರಾಗಿ ತಂಗಿಯನ್ನು ರೇಗಿಸಿದ ವಿಚಾರವನ್ನು ಎತ್ತಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಗಲಾಟೆ ನಡೆದಿದೆ. ಈ ವೇಳೆ ನಂಜುಂಡಸ್ವಾಮಿಯು ಅಜಯ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ನಂದೀಶ್‌ ಮತ್ತು ಕಿರಣ್‌, ಕೂಡಲೇ ನಂಜುಂಡಸ್ವಾಮಿಯನ್ನು ಹಿಡಿದುಕೊಂಡಿದ್ದಾರೆ. ಕ್ರೋಧಗೊಂಡ ಅಜಯ್‌ ನಂಜುಂಡಸ್ವಾಮಿಯ ಕತ್ತು ಸೀಳಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಗಿ ಮೂಲಗಳು ತಿಳಿಸಿವೆ.