ಕಾಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 5 ವರ್ಷದ ಬಾಲಕಿ ವೆನ್ನೆಲಾ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಮತ್ತೊಂದೆಡೆ ಈ ಹಿಂದೆ ಕಾಡುಗೋಡಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ರಂಗಸ್ವಾಮಿ ಈ ಕೇಸ್‌ ಹಳ್ಳ ಹಿಡಿಸಲು ಮುಂದಾಗಿದ್ದರು ಎನ್ನಲಾಗಿದೆ.

 ಬೆಂಗಳೂರು : ಕಾಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 5 ವರ್ಷದ ಬಾಲಕಿ ವೆನ್ನೆಲಾ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಮತ್ತೊಂದೆಡೆ ಈ ಹಿಂದೆ ಕಾಡುಗೋಡಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ರಂಗಸ್ವಾಮಿ ಈ ಕೇಸ್‌ ಹಳ್ಳ ಹಿಡಿಸಲು ಮುಂದಾಗಿದ್ದರು ಎನ್ನಲಾಗಿದೆ.

ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವ ಕಾರಣವೇ ರಿಯಲ್ ಎಸ್ಟೇಟ್

ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವ ಕಾರಣವೇ ರಿಯಲ್ ಎಸ್ಟೇಟ್ ಆಗಿದೆ. ಆರೋಪಿ ಮೋಹನ್‌ ರಿಯಲ್‌ ಎಸ್ಟೇಟ್‌ ಕಂಪನಿಯನ್ನು ಹೊಂದಿದ್ದು, ಇನ್ಸ್‌ಪೆಕ್ಟರ್‌ ರಂಗಸ್ವಾಮಿ ಮತ್ತು ಆರೋಪಿ ಮೋಹನ್‌ ಇಬ್ಬರು ಸ್ನೇಹಿತರಾಗಿದ್ದರು. ಮೋಹನ್ ಜತೆ ರಂಗಸ್ವಾಮಿ ಅನೇಕ ವರ್ಷಗಳಿಂದ ಸಂಪರ್ಕದಲ್ಲಿದ್ದರು. ಹೀಗಾಗಿ ರಂಗಸ್ವಾಮಿ ಮೋಹನ್ ಜತೆ ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿ ತಮಗೆ ಆತ್ಮೀಯನಾಗಿರುವುದರಿಂದ ಪ್ರಕರಣ ದಾಖಲಿಸಲು ಹಿಂದೇಟು

ಈ ಕಾರಣಕ್ಕಾಗಿಯೇ ಆರೋಪಿ ಮೋಹನ್ ಬೆನ್ನಿಗೆ ಅವರು ನಿಂತಿದ್ದರು. ಆರೋಪಿ ತಮಗೆ ಆತ್ಮೀಯನಾಗಿರುವುದರಿಂದಲೇ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಮೃತ ಬಾಲಕಿಯ ತಂದೆಯನ್ನು ಒಮ್ಮೆಯೂ ಭೇಟಿ ಮಾಡಿರಲಿಲ್ಲ. ಕಾಟಾಚಾರಕ್ಕೆ ಅಸಹಜ ಸಾವು ಪ್ರಕರಣ (ಯುಡಿಆರ್‌) ದಾಖಲಿಸಿ ಸುಮ್ಮನಾಗಿದ್ದರು. ನಂತರ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರು.

ಬಾಲಕಿ ಸಾವಿನ ಬಗ್ಗೆ ಮಾಹಿತಿಯನ್ನೇ ಪಡೆಯದೇ ಇನ್ಸ್‌ಪೆಕ್ಟರ್‌ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ. ಸದ್ಯ ರಂಗಸ್ವಾಮಿ ಸೇರಿ ಮೂವರನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆ ಮುಂದುವರಿದಿದೆ. ಆರೋಪಿ ಮೋಹನ್‌ ಮತ್ತು ಪ್ರಿಯಾಂಕ ಅವರನ್ನು ಮತ್ತೆ 10 ದಿನ ಕಸ್ಟಡಿಗೆ ಪಡೆಯಲಾಗಿದೆ.

ಬಾಣಸವಾಡಿ ಎಸಿಪಿ ನೇತೃತ್ವದ ತನಿಖೆ ಚುರುಕುಗೊಳಿಸಲಾಗಿದೆ. ಪ್ರಕರಣದ ತನಿಖೆಗೆ 8 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಈ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ. ರೇಣುಕಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲಿಯೇ ವೈಜ್ಞಾನಿಕ ತನಿಖೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.