ಆಸ್ತಿ ನೋಂದಣಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಬೇಕು. ಇ-ಖಾತಾ ಅನುಷ್ಠಾನದಲ್ಲಿನ ತಾಂತ್ರಿಕ ವೈಫಲ್ಯವಾಗಿದೆ. ರಾಜ್ಯಾದ್ಯಂತ ಕಡ್ಡಾಯಗೊಳಿಸಲಾದ ಇ-ಖಾತಾ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರವು ಎದುರಿಸುತ್ತಿರುವ ಗಂಭೀರ ಆಡಳಿತಾತ್ಮಕ ಅಡೆತಡೆಗಳು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ಕ್ರೆಡೈ ಅಧ್ಯಕ್ಷ ಹರೀಶ್ ಶೆಣೈ ಹಾಗೂ ಗೌ.ಕಾರ್ಯದರ್ಶಿ ನಾಗರಾಜ ವಿ. ಬೈರಿ ಒತ್ತಾಯಿಸಿದ್ದಾರೆ.

ಆಸ್ತಿ ನೋಂದಣಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಬೇಕು. ಇ-ಖಾತಾ ಅನುಷ್ಠಾನದಲ್ಲಿನ ತಾಂತ್ರಿಕ ವೈಫಲ್ಯವಾಗಿದೆ. ರಾಜ್ಯಾದ್ಯಂತ ಕಡ್ಡಾಯಗೊಳಿಸಲಾದ ಇ-ಖಾತಾ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ದತ್ತಾಂಶಗಳ ಸಮನ್ವಯದ ಕೊರತೆಯಿಂದಾಗಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಂತ್ರಿಕ ದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಮತ್ತು ಇ-ಖಾತಾ ನೀಡಲು ಕಾಲಮಿತಿ ನಿಗದಿಪಡಿಸಬೇಕು. ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸರಿಯಾಗುವವರೆಗೆ ಹಳೆಯ ಪದ್ಧತಿಯಲ್ಲೂ ನೋಂದಣಿಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರ ನಿಗದಿಯಲ್ಲಿ ವಿಳಂಬ ಆಗುತ್ತಿದೆ. ಹೊಸ ಬಡಾವಣೆಗಳ ದರ ನಿಗದಿಪಡಿಸಲು ಇರುವ ಕೇಂದ್ರ ಮೌಲ್ಯಮಾಪನ ಸಮಿತಿ ನಿಯಮಗಳನ್ನು ಹಳೆಯ ಬಡಾವಣೆಗಳಿಗೂ ಅನ್ವಯಿಸುತ್ತಿರುವುದು ಅವೈಜ್ಞಾನಿಕ. ಇದು ಆಡಳಿತಾತ್ಮಕ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.

ಹಳೆಯ ಬಡಾವಣೆಗಳಿಗೆ ಸಿವಿಸಿ ದರ ನಿಗದಿ ನಿಯಮದಿಂದ ವಿನಾಯಿತಿ ನೀಡಬೇಕು. ಕೇವಲ ಉಪ-ನೋಂದಣಾಧಿಕಾರಿ ಮಾರ್ಗಸೂಚಿ ದರದ ಆಧಾರದ ಮೇಲೆ ಸರಳವಾಗಿ ನೋಂದಣಿ ಪ್ರಕ್ರಿಯೆ ನಡೆಯಲು ಅವಕಾಶ ನೀಡಬೇಕು, ಜಿಪಿಎ ನೋಂದಣಿಗೆ ಜೀವಂತ ಪ್ರಮಾಣಪತ್ರದ ಕಡ್ಡಾಯ ಸರಿಯಲ್ಲ. ಪ್ರತಿ ವ್ಯವಹಾರಕ್ಕೂ ಹೊಸದಾಗಿ ''''''''ಜೀವಂತ ಪ್ರಮಾಣಪತ್ರ ತರಬೇಕೆಂಬ ನಿಯಮವು ಹಿರಿಯ ನಾಗರಿಕರಿಗೆ ಮತ್ತು ಅನಿವಾಸಿ ಭಾರತೀಯರಿಗೆ ದೊಡ್ಡ ಹೊರೆಯಾಗಿದೆ ಎಂದರು.

ಒಮ್ಮೆ ಅಧಿಕೃತವಾಗಿ ನೋಂದಾಯಿತವಾದ ಜಿಪಿಎಗೆ ಪ್ರತಿ ವಹಿವಾಟಿಗೂ ಪದೇ ಪದೇ ಜೀವಂತ ಪ್ರಮಾಣಪತ್ರ ಕೇಳುವ ನಿಯಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಹರಿ ದ್ವಾರಕನಾಥ್‌ ಮೊದಲಾದವರು ಇದ್ದರು.