ಬೆಂಗಳೂರು: ಆತಂಕ ಸೃಷ್ಟಿಸಿದ ಎಟಿಎಂ ಬಾಕ್ಸ್‌!

KannadaprabhaNewsNetwork | Updated : Feb 15 2024, 08:27 AM IST

ಸಾರಾಂಶ

ಬೆಂಗಳೂರಿನ ಮಿನರ್ವಾ ವೃತ್ತದಲ್ಲಿ ಎಟಿಎಂ ಬಾಕ್ಸ್‌ಗಳು ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮಿನರ್ವ ಸರ್ಕಲ್ ಬಳಿ ಖಾಲಿ ಎಟಿಎಂ ಬಾಕ್ಸ್‌ಗಳು ಪತ್ತೆಯಾಗಿ ಕೆಲ ಕಾಲ ಆಂತಕ ಸೃಷ್ಟಿಸಿದ ಘಟನೆ ನಡೆದಿದೆ.

ಮಿನರ್ವ ಸರ್ಕಲ್‌ನ ಖಾಸಗಿ ಬ್ಯಾಂಕಿನ ಎಟಿಎಂ ಬಳಿ ಎರಡು ಖಾಲಿ ಬಾಕ್ಸ್‌ಗಳನ್ನು ನೋಡಿದ ಎಟಿಎಂ ಕಾವಲುಗಾರ ತಿರುಮಲೈ, ಕೂಡಲೇ ಆ ವೃತ್ತದ ಬಳಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 

ಘಟನಾ ಸ್ಥಳಕ್ಕೆ ತೆರಳಿದ ಕಲಾಸಿಪಾಳ್ಯ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳನ್ನು ಕರೆಸಿ ತಪಾಸಣೆ ನಡೆಸಿದಾಗ ಗುಜರಿ ವಸ್ತುಗಳು ಎಂಬುದು ಗೊತ್ತಾಗಿದೆ.

ಇವುಗಳು ಎಟಿಎಂ ಯಂತ್ರದಲ್ಲಿ ಹಣ ತುಂಬುವ ಬಾಕ್ಸ್‌ಗಳಾಗಿವೆ. ಈ ಬಾಕ್ಸ್‌ಗಳ ಬಗ್ಗೆ ಅಲ್ಲೇ ಸಮೀಪದ ಖಾಸಗಿ ಬ್ಯಾಂಕಿನ ಅಧಿಕಾರಿಗಳನ್ನು ವಿಚಾರಿಸಿದಾಗ ಅವು ತಮ್ಮ ಬ್ಯಾಂಕ್‌ಗೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ನಂತರ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಚಿಂದಿ ಆಯುವ ವ್ಯಕ್ತಿ ಅವುಗಳನ್ನು ತಂದಿಟ್ಟಿರುವುದು ಗೊತ್ತಾಯಿತು.

ಕಲಾಸಿಪಾಳ್ಯದ ಗುಜರಿ ಅಂಗಡಿಗೆ ಆ ಬಾಕ್ಸ್‌ಗಳನ್ನು ಮಾರಾಟ ಮಾಡಲು ಚಿಂದಿ ಆಯುವ ವ್ಯಕ್ತಿ ತೆರಳಿದ್ದಾನೆ. 

ಆದರೆ ಆ ಬಾಕ್ಸ್‌ಗಳನ್ನು ಖರೀದಿಸಲು ವ್ಯಾಪಾರಿಗಳು ನಿರಾಕರಿಸಿದ್ದರಿಂದ ಮಿನರ್ವ ವೃತ್ತದ ಬಳಿ ಬಿಸಾಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share this article