ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅವರು ಪಿಎಸ್‌ಐ ಅಯ್ಯನಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಡೆದಿದ್ದೇನು?ಇಲ್ಲಿನ ಅಶೋಕನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ರವಿ ನರ್ಸಿಂಗ್ ಹೋಂ ಪಕ್ಕದ ನಿವಾಸಿ ರೂಪಾದೇವಿ (39) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆ. ಹಸುಗಳನ್ನು ಸಾಕಿಕೊಂಡಿರುವ ರೂಪಾದೇವಿ ಮತ್ತು ಆಕೆಯ ತಾಯಿ ಮನೆಯ ಪಕ್ಕದಲ್ಲೇ ಹಾಲು ಕರೆದು ಗ್ರಾಹಕರಿಗೆ ನೀಡುತ್ತಾ ಬದುಕು ಸಾಗಿಸುತ್ತಿದ್ದರು. ಹಸುಗಳನ್ನು ರಸ್ತೆಗಳಲ್ಲೇ ಕಟ್ಟಿಹಾಕುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಪಕ್ಕದ ಮನೆಯವರೂ ಸಹ ಹಸುಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಮತ್ತೆ ಹಸು ಕಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ರೂಪಾದೇವಿಯನ್ನು ಪೊಲೀಸ್ ಜೀಪಿನಲ್ಲಿ ಯಾವುದೇ ಮಹಿಳಾ ಪೊಲೀಸರಿಲ್ಲದೆ, ಪುರುಷ ಪೊಲೀಸರೇ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಲಾಠಿ ಮತ್ತು ಬೆಲ್ಟ್‌ನಿಂದ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರೂಪಾದೇವಿಯ ಎರಡೂ ಕೈಗಳು ಮತ್ತು ಕಾಲು ಊತ ಬಂದಿದ್ದು, ಕೆಲವೆಡೆ ಲಾಠಿ ಏಟಿನ ಬರೆ ಬಂದಿದೆ. ಜೊತೆಗೆ ಕೈಗಳು ನೀಲಿಗಟ್ಟಿವೆ. ಪೊಲೀಸರ ಥಳಿತದಿಂದ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ.
ಪಿಎಸ್‌ಐ ಅಯ್ಯನಗೌಡ ವಿರುದ್ಧ ಪ್ರತಿಭಟನೆ
ಯಾವ ಕಾರಣವೂ ಇಲ್ಲದೆ ಮಹಿಳೆಯರನ್ನು ಠಾಣೆಗೆ ಕರೆತಂದು ಮಾರಣಾಂತಿಕ ಹಲ್ಲೆ ಮಾಡಿ ಗೂಂಡಾಗಿರಿ ವರ್ತನೆ ತೋರಿರುವ ಪೊಲೀಸರ ಕ್ರಮ ಖಂಡಿಸಿದರು. ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಕೊಲೆ, ಬಾಲ್ಯ ವಿವಾಹದಂತಹ ಮಹಿಳಾ ವಿರೋಧಿ ವಿಚಾರಗಳಲ್ಲಿ ಮಂಡ್ಯ ಸುದ್ದಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿದರು.
ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿಐಟಿಯುನ ಸಿ. ಕುಮಾರಿ, ಮುಖಂಡರಾದ ಲತಾಶಂಕರ್, ರಾಧಾಮಣಿ, ಕೃಷ್ಣೇಗೌಡ, ಕೃಷ್ಣಪ್ರಕಾಶ್, ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕ್ಷುಲ್ಲಕ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ರೂಪಾದೇವಿ ತಾಯಿ ಗೌರಮ್ಮ ನೀಡಿದ ದೂರಿನನ್ವಯ ಪೂರ್ವ ಪೊಲೀಸ್ ಠಾಣೆ ಪಿಎಸ್‌ಐ ಅಯ್ಯನಗೌಡ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಲವಾರು ಕಡೆ ಅಯ್ಯನಗೌಡ ಅಸಭ್ಯ ವರ್ತನೆಪಿಎಸ್‌ಐ ಅಯ್ಯನಗೌಡ ಅಸಭ್ಯ ವರ್ತನೆ ಈಗ ಹೊಸದೇನೂ ಅಲ್ಲ. ಈ ಹಿಂದೆ ಕಾರ್ಯನಿರ್ವಹಿಸಿದ ಪೊಲೀಸ್ ಠಾಣೆಗಳಲ್ಲೂ ಅಸಭ್ಯವಾಗಿ ವರ್ತಿಸಿರುವ ನಿದರ್ಶನಗಳಿವೆ. ಈ ಹಿಂದೆ ಅವರು ಬೆಸಗರಹಳ್ಳಿ, ಪಾಂಡವಪುರ, ಕೆ.ಎಂ. ದೊಡ್ಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದರ್ಪ ಪ್ರದರ್ಶಿಸಿ ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಾಂಡವಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ರೈತರು ಅಯ್ಯನ ಗೌಡ ವಿರುದ್ಧ ಘೇರಾವ್ ಮಾಡಿದ್ದರು. ಹೀಗೆ ತಾವು ಕೆಲಸ ಮಾಡಿದ ಠಾಣೆಯಲ್ಲಿದ್ದಾಗಲೆಲ್ಲ ಒಂದಲ್ಲಾ ಒಂದು ರೀತಿ ದೌರ್ಜನ್ಯದಿಂದ ನಡೆದುಕೊಂಡಿರುವ ಇತಿಹಾಸ ಇರುವ ಅಯ್ಯನಗೌಡ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದಲೇ ವಜಾ ಮಾಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರಿಗೆ ಮನವಿ ಮಾಡಿದ್ದಾರೆ. ಅಯ್ಯನ್‌ಗೌಡ ಬಡ್ತಿ ಪಡೆಯುವ ಹಂತದಲ್ಲಿರುವಾಗ ಅಮಾನತುಗೊಂಡು ಹಿನ್ನಡೆ ಅನುಭವಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ನಡೆಸಿ ಅಮಾನವೀಯ ವರ್ತನೆ ಪ್ರದರ್ಶಿಸಿರುವ ಪಿಎಸ್‌ಐ ಅಯ್ಯನಗೌಡ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅಯ್ಯನಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.-ಎನ್.ಯತೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕರು