ಜಾಗಕ್ಕಾಗಿ ದೊಡ್ಡಪ್ಪನ ಮಗನ ಮೇಲೆ ಹಲ್ಲೆ : 6 ಮಂದಿ ದಾಯಾದಿಗಳ ಬಂಧನ

KannadaprabhaNewsNetwork |  
Published : Apr 29, 2025, 01:46 AM ISTUpdated : Apr 29, 2025, 05:15 AM IST
ಬಂಧನ | Kannada Prabha

ಸಾರಾಂಶ

 ದೊಡ್ಡಪ್ಪನ ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪದಡಿ   ಅಪ್ರಾಪ್ತ ಪುತ್ರ ಸೇರಿ 6 ಮಂದಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಜಾಗದ ವಿಚಾರಕ್ಕೆ ದೊಡ್ಡಪ್ಪನ ಮಗನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಡಿ ಗಾಯಾಳುವಿನ ಚಿಕ್ಕಪ್ಪನ ಅಪ್ರಾಪ್ತ ಪುತ್ರ ಸೇರಿ 6 ಮಂದಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಹಕಾರನಗರದ ಸತೀಶ್, ಭರತ್, ತೇಜಸ್, ಗಣೇಶ್‌, ಪ್ರೇಮ್‌ ಹಾಗೂ ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಏ.25ರಂದು ರಾತ್ರಿ ಸಹಕಾರದ ಬಿಬಿಎಂಪಿ ಒಳಾಂಗಣ ಕ್ರೀಡಾಂಗಣದ ಜಿಮ್‌ನಲ್ಲಿ ಮುನಿಕುಮಾರ್‌(30) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ 6 ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಪ್ರಕರಣದ ವಿವರ:

ಸಹಕಾರನಗರ ನಿವಾಸಿ ಮುನಿಕುಮಾರ್‌ ಅವರ ತಂದೆ ಮುನಿರಾಜು ಕುಟುಂಬಕ್ಕೂ ಮತ್ತು ಅವರ ತಮ್ಮ ಚಿಕ್ಕಮುನಿಯಪ್ಪ ಕುಟುಂಬದ ನಡುವೆ ಜಾಗದ ವಿಚಾರಕ್ಕೆ ಗಲಾಟೆಗಳು ಆಗುತ್ತಿದ್ದವು. ಏ.22ರಂದು ಎರಡೂ ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಏ.25ರಂದು ರಾತ್ರಿ ಸುಮಾರು 7.30ಕ್ಕೆ ಮುನಿಕುಮಾರ್‌ ಜಿಮ್‌ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟ್ಟಿದ್ದಾನೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದ ಅಪ್ರಾಪ್ತ ಹಾಗೂ ಆತನ ಸಹಚರರು ರಾಡ್‌ನಿಂದ ಮುನಿಕುಮಾರ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಬೆನ್ನಟ್ಟಿ ಹಲ್ಲೆ:

ಬಳಿಕ ಮುನಿಕುಮಾರ್‌ ತಪ್ಪಿಸಿಕೊಂಡು ಜಿಮ್‌ನೊಳಗೆ ಓಡಿ ಹೋಗಿದ್ದಾನೆ. ಅಲ್ಲಿಗೂ ಬೆನ್ನಟ್ಟಿ ಬಂದಿರುವ ಆರೋಪಿಗಳು ರಾಡ್‌ ಹಾಗೂ ಲಾಂಗ್‌ನಿಂದ ಮುನಿಕುಮಾರ್‌ ಕುತ್ತಿಗೆ, ಕೈ, ತಲೆಗೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಜಿಮ್‌ನಲ್ಲಿದ್ದವರು ಓಡಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮುನಿಕುಮಾರ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಗಾಯಾಳು ಮುನಿಕುಮಾರ್‌ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ