ಮದ್ದೂರು : ಪತ್ನಿ, ಮಗು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನ- ಪತಿ ಆರೋಪ

KannadaprabhaNewsNetwork | Updated : Mar 09 2025, 04:18 AM IST

ಸಾರಾಂಶ

ಪತ್ನಿ ಮತ್ತು ಮಗುವನ್ನು ಅಪಹರಿಸಿ ಆಕೆ ಕುಟುಂಬದವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸುತ್ತಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ  ಪತಿ ಶುಕ್ರವಾರ ರಾತ್ರಿ ಮದ್ದೂರು ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದರು.

 ಮದ್ದೂರು : ಪತ್ನಿ ಮತ್ತು ಮಗುವನ್ನು ಅಪಹರಿಸಿ ಆಕೆ ಕುಟುಂಬದವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸುತ್ತಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಪತಿ ಶುಕ್ರವಾರ ರಾತ್ರಿ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯ ಎಚ್.ಆರ್.ವೆಂಕಟೇಶ್ ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಪತ್ನಿ ಕುಟುಂಬದ ವಿರುದ್ಧ ಅಪಹರಣ ಮತ್ತು ಮತಾಂತರ ಪ್ರಕರಣ ದಾಖಲಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದು ಪೊಲೀಸರ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅಬ್ಬೂರು ಗ್ರಾಮದ ಆರಿಫಾ ಎಂಬುವವರನ್ನು ಸಿದ್ಧಾರ್ಥ ನಗರ ಬಡಾವಣೆಯ ದಲಿತ ಕೋಮಿನ ವೆಂಕಟೇಶ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮಗು ಇದೆ. ವಿವಾಹ ನಂತರ ಪತ್ನಿ ಆರಿಫಾ ಅವರ ಹೆಸರನ್ನು ಖುಷಿ ಎಂದು ಬದಲಾಯಿಸಿಕೊಂಡಿದ್ದರು.

ಆರಿಫಾ ಕುಟುಂಬಸ್ಥರು ನಿನ್ನ ತಾಯಿಗೆ ಅನಾರೋಗ್ಯವಾಗಿದೆ ಎಂದು ಹೇಳಿ ಆಕೆಯನ್ನು ತವರು ಮನೆಗೆ ಕರೆಸಿಕೊಂಡಿದ್ದರು. ಮತ್ತೆ ಆಕೆ ಗಂಡನ ಮನೆಗೆ ಕಳುಹಿಸಿಕೊಡದೆ ಮತ್ತೆ ನೀನು ಮತ್ತು ಮಗುವನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿ ತಾಯಿ ಮಗುವನ್ನು ಗೃಹಬಂಧನದಲ್ಲಿಟ್ಟಿದ್ದರು.

ಈ ಬಗ್ಗೆ ಪತ್ನಿ ಖುಷಿ ಪತಿ ವೆಂಕಟೇಶ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಆನಂತರ ವೆಂಕಟೇಶ್ ಪತ್ನಿ ಮತ್ತು ಮಗುವನ್ನು ಗೃಹಬಂಧನದಲ್ಲಿರಿಸಿ ಮತಾಂತರಕ್ಕೆ ಒತ್ತಾಯಿಸುತ್ತಿರುವುದರ ಬಗ್ಗೆ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದರು.

ಪೊಲೀಸರ ಈ ಧೋರಣೆ ಬಗ್ಗೆ ವೆಂಕಟೇಶ್ ಹಿಂದೂಪರ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವುದನ್ನು ಅರಿತ ಪೊಲೀಸರು ವೆಂಕಟೇಶ್ ಪತ್ನಿ ಕುಟುಂಬದವರ ವಿರುದ್ಧ ಅಪಹರಣ ಮತ್ತು ಮತಾಂತರ ಪ್ರಕರಣದ ಹಿನ್ನೆಲೆಯಲ್ಲಿ ಬಿ.ಎನ್.ಎಸ್.ಕಾಯ್ದೆ 140, 115, 351 ಹಾಗೂ 352 ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಧರಣಿ ಅಂತ್ಯಗೊಂಡಿತು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ, ವಕೀಲ ಯೋಗಾನಂದ, ಮುಖಂಡರಾದ ಗುರುಸ್ವಾಮಿ, ನೈದಿಲೆ ಚಂದ್ರು, ಎಂ.ಸಿ.ಸಿದ್ದು, ಎಂ.ಎಸ್.ಜಗನ್ನಾಥ, ಮಧು ಕುಮಾರ್, ಮಾ.ನ.ಪ್ರಸನ್ನ ಕುಮಾರ್, ಎಂ. ಜೆ.ಅನಿಲ್ ಕುಮಾರ್, ವೀರಭದ್ರಸ್ವಾಮಿ, ಅಭಿ.ಧನಂಜಯ ಮತ್ತಿತರರು ಭಾಗವಹಿಸಿದ್ದರು.

Share this article