ಕಾಲೇಜು ವಿದ್ಯಾರ್ಥಿನಿ ಅಪಹರಿಸಿ ವಿವಾಹ ಮಾಡಿಸಲು ಯತ್ನ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಕಾಲೇಜು ವಿದ್ಯಾರ್ಥಿನಿ ಅಪಹರಿಸಿ ವಿವಾಹ ಮಾಡಿಸಲು ಯತ್ನ ಸ್ನೇಹಿತ ಜೊತೆಗೆ ವಿವಾಹ ಮಾಡಲು ಯತ್ನಿಸಿದ ಮೂವರ ಬಂಧನ
ಸ್ನೇಹಿತ ಜೊತೆಗೆ ವಿವಾಹ ಮಾಡಲು ಯತ್ನಿಸಿದ ಮೂವರ ಬಂಧನ ಕನ್ನಡಪ್ರಭ ವಾರ್ತೆ ಮದ್ದೂರು ರಾಮನಗರ ಮೂಲದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಸ್ನೇಹಿತನಿಗೆ ವಿವಾಹ ಮಾಡಲು ಯತ್ನಿಸಿದ ಮೂವರು ಯುವಕರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕುದರಗುಂಡಿ ಗ್ರಾಮದ ಹಿತೇಶ್ ಪಟೇಲ್ ಈತನ ಸ್ನೇಹಿತರಾದ ಚಂದ್ರಕಾಂತ್ ಹಾಗೂ ಶಿವಕುಮಾರ್ ಅಲಿಯಾಸ್ ಶಿವು ಬಂಧಿತ ಆರೋಪಿಗಳು. ಮೂವರ ವಿರುದ್ಧ ಪೊಲೀಸರು ಐಪಿಸಿ 360, 354 ಡಿ ಹಾಗೂ 350 ರನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬಂಧಿತರನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ 2 ನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮೂಲತಃ ರಾಮನಗರ ತಾಲೂಕು, ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದ ಯುವತಿ ಕೆಂಗೇರಿಯ ಬಿಜಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯನ್ನು ಹಿತೇಶ್ ಪಟೇಲ್‌ಗೆ ವಿವಾಹ ಮಾಡುವ ಉದ್ದೇಶದಿಂದ ಈತನ ಸ್ನೇಹಿತರಾದ ಚಂದ್ರಕಾಂತ, ಶಿವಕುಮಾರ್ ಅಲಿಯಾಸ್ ಶಿವ ಇವರುಗಳು ಕಳೆದ ಅ.20 ರಂದು ತನ್ನ ಕಿಯಾ ಕಾರಿನಲ್ಲಿ ಅಪಹರಿಸಿಕೊಂಡು ಬಂದಿದ್ದರು. ಈ ಬಗ್ಗೆ ಮಗಳು ನಾಪತ್ತೆಯಾಗಿದ್ದ ಬಗ್ಗೆ ಪೋಷಕರು ದೂರು ನೀಡಿದ್ದರು. ದೂರು ಪಡೆದು ತನಿಖೆ ಕೈಗೊಂಡ ಪೊಲೀಸರು, ಯುವತಿಯ ಅಪಹರಣ ಬೆಳಕಿಗೆ ಬಂತು. ಪೊಲೀಸರು ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನನ್ನು ಚಂದ್ರಕಾಂತ್ ಹಾಗೂ ಶಿವಕುಮಾರ್ ಅವರು ಅಪಹರಣ ಮಾಡಿ ಹಿತೇಶ್ ಪಟೇಲ್‌ನೊಂದಿಗೆ ವಿವಾಹ ಮಾಡಲು ಸಂಚು ರೂಪಿಸಿದ್ದರು ಎಂದು ಹೇಳಿಕೆ ನೀಡಿದ್ದರು.

Share this article