ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿಕ್ಕಬಾಣಾವರ ಸಮೀಪದ ಅಬ್ಬಿಗೆರೆ ನಿವಾಸಿ ಡಿ.ರಾಜ ಅಲಿಯಾಸ್ ಗೋವಾ ರಾಜ ಬಂಧಿತನಾಗಿದ್ದು, ಆರೋಪಿಯಿಂದ 1.232 ಕೆಜಿ ಚಿನ್ನಾಭರಣ ಹಾಗೂ ಬೈಕ್ ಸೇರಿದಂತೆ 1.84 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಎನ್‌ಜಿಎಫ್ ಲೇಔಟ್‌ನಲ್ಲಿ ಉದ್ಯಮಿ ಉದಯ್ ನಾಯ್ಕ್ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕೊನೆಗೆ ರಾಜನನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಆಟೋ ರಾಜ ಈಗ ಗೋವಾ ರಾಜ!ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ರಾಜ ಎಂಟನೇ ತರಗತಿ ನಂತರ ಶಾಲೆ ಬಿಟ್ಟಿದ್ದ. ಬಳಿಕ ದಾವಣಗೆರೆಯಲ್ಲಿ ಎರಡ್ಮೂರು ಟಿಟಿ ವಾಹನ ಇಟ್ಟುಕೊಂಡು ಟ್ರಾವೆಲ್ಸ್ ಏಜೆನ್ಸಿ ನಡೆಸಿ ಜೀವನ ಸಾಗಿಸುತ್ತಿದ್ದ. ಆದರೆ ಕೊರೋನಾ ಕಾಲದಲ್ಲಿ ಆತನಿಗೆ ಆರ್ಥಿಕ ನಷ್ಟವಾಗಿದೆ. ಇದರಿಂದ ಕಂಗಾಲಾದ ರಾಜ, ದಾವಣಗೆರೆ ತೊರೆದು ಬೆಂಗಳೂರಿಗೆ ಬಂದಿದ್ದ. ಆದರೆ ಆರಂಭದಲ್ಲಿ ಆಟೋ ಓಡಿಸುತ್ತಿದ್ದ ರಾಜ ಬಳಿಕ ಕಳ್ಳತನ ಕೃತ್ಯಕ್ಕೆ ಇಳಿದಿದ್ದಾನೆ
ಕೆಲ ದಿನಗಳ ಹಿಂದೆ ಎನ್‌ಜಿಎಫ್ ಲೇಔಟ್‌ನಲ್ಲಿ ನೆಲೆಸಿರುವ ಉದ್ಯಮಿ ಉದಯ್ ಅವರು ತಮ್ಮ ಕುಟುಂಬ ಸಮೇತ ಹುಟ್ಟೂರು ಕುಂದಾಪುರಕ್ಕೆ ಹೋಗಿದ್ದ ವೇಳೆ ಅವರ ಮನೆಗೆ ಬೀಗ ಮುರಿದು ಲಕ್ಷಾಂತರ ರು ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್ ಪಿ.ಶಿವಕುಮಾರ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮಾಸ್ಕ್ ಮ್ಯಾನ್‌ನನ್ನು ಬೆನ್ನತ್ತಿದ್ದಾಗ ರಾಜ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.