ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಸ್ವಯಂಚಾಲಿತ ಕ್ಲಿಯರೆನ್ಸ್‌ ವ್ಯವಸ್ಥೆ

KannadaprabhaNewsNetwork | Published : Jan 30, 2024 2:01 AM

ಸಾರಾಂಶ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್‌ ಚೆಕ್‌ ಇನ್ನುಮುಂದೆ ಸಲೀಸಾಗಲಿದೆ. ಹೊಸ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ನವದೆಹಲಿ: ದೇಶೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುವಾಗ ಮತ್ತು ವಿದೇಶಗಳಿಂದ ಭಾರತಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣಗಳಲ್ಲಿ ಇಮಿಗ್ರೇಷನ್‌ ಚೆಕ್‌ (ವಲಸೆ ವಿಭಾಗದಿಂದ ಪರಿಶೀಲನೆ) ಸಾಕಷ್ಟು ಸಮಯ ಹಿಡಿಯುವ ಪ್ರಕ್ರಿಯೆ. ಹೀಗಾಗಿಯೇ ಪ್ರಯಾಣಕ್ಕೆ ಹಲವು ಗಂಟೆಗಳ ಮೊದಲೇ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುವ ಮತ್ತು ವಿದೇಶಗಳಿಂದ ಆಗಮಿಸಿದ ಬಳಿಕ ಹಲವು ಗಂಟೆಗಳ ಕಾಲ ಇಮಿಗ್ರೇಷನ್‌ ಚೆಕ್‌ ವಿಭಾಗದಲ್ಲಿ ಕಾಲ ಕಳೆಯಬೇಕಾಗಿ ಬರುತ್ತದೆ.

ಪ್ರಯಾಣಿಕರ ಈ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಡಿಜಿ ಯಾತ್ರಾ ಆ್ಯಪ್‌ ಬಳಸಿಕೊಂಡು ಬಯೋಮೆಟ್ರಿಕ್‌ ಇಮಿಗ್ರೇಷನ್‌ ಚೆಕ್‌ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ ವಿದೇಶ ಪ್ರಯಾಣಕ್ಕೆ ಅತಿ ಹೆಚ್ಚು ಬಳಕೆಯಾಗುವ ಬೆಂಗಳೂರು, ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ವಿಮಾನ ಸಚಿವಾಲಯ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.ಹಾಲಿ ವ್ಯವಸ್ಥೆ ಏನಿದೆ?

ಹಾಲಿ ಪ್ರಯಾಣಿಕರು ಭಾರತದಿಂದ ವಿದೇಶಕ್ಕೆ ತೆರಳುವಾಗ ಮತ್ತು ವಿದೇಶದಿಂದ ತವರಿಗೆ ಬಂದಾಗ ವಿಮಾನ ನಿಲ್ದಾಣದ ಇಮಿಗ್ರೇಷನ್‌ ವಿಭಾಗದಲ್ಲಿ ತಮ್ಮ ಪಾಸ್ಪೋರ್ಟ್‌ ಅನ್ನು ಪರಿಶೀಲನೆಗೆ ನೀಡಬೇಕು. ಇದು ಸಾಕಷ್ಟು ಸಮಯ ಹಿಡಿಯುವ ಪ್ರಕ್ರಿಯೆ.ಏನಿದು ಹೊಸ ವ್ಯವಸ್ಥೆ?

ಹೊಸ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರುವ ಪ್ರಯಾಣಿಕರು ಸಾಮಾನ್ಯ ಕೌಂಟರ್‌ಗಳಿಗೆ ತೆರಳಿ ಅಲ್ಲಿ ಐರಿಸ್‌ (ಕಣ್ಣು), ಮಖಚಹರೆ ಮತ್ತು ಫಿಂಗರ್‌ಪ್ರಿಂಟ್‌ ಬಯೋಮೆಟ್ರಿಕ್ ವ್ಯವಸ್ಥೆ ತಪಾಸಣೆಗೆ ಒಳಪಡಬೇಕು. ಈ ವೇಳೆ ಅವರ ಎಲ್ಲಾ ಮಾಹಿತಿಗಳು ಸಂಗ್ರಹವಾಗುತ್ತದೆ. ಹೀಗಾಗಿ ಈ ಪ್ರಯಾಣಿಕರು ಭಾರತದಿಂದ ತೆರಳುವ ವೇಳೆ ಮತ್ತು ಮುಂದಿನ ಬಾರಿ ಭಾರತಕ್ಕೆ ಬರುವ ವೇಳೆ ಅವರು ಡಿಜಿಯಾತ್ರ ಆ್ಯಪ್‌ ಬಳಸಿದರೆ ತಮ್ಮ ಪಾಸ್ಪೋರ್ಟ್‌ ಅನ್ನು ಮರಳಿ ಪರಿಶೀಲನೆಗೆ ಒಳಪಡಿಸುವ ಅವಶ್ಯಕತೆ ಇರುವುದಿಲ್ಲ. ಅದರ ಬದಲಾಗಿ ಅವರು ಐರಿಸ್‌ ಅಥವಾ ಮುಖಚಹರೆ ಯಂತ್ರದ ಮೂಲಕ ಹಾದು ಹೋದರೆ ಸಾಕು ಅಲ್ಲಿ ಅವರ ಎಲ್ಲಾ ಮಾಹಿತಿಗಳು ಪರಿಶೀಲನೆಗೆ ಒಳಪಡುತ್ತದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ.

Share this article