ಬೆಂಗಳೂರು : ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿ ಕೆ.ಆರ್.ಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ಭಾರತಿನಗರ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಆಗಿರುವ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ಅವರ ಮುಂದೆ ಬುಧವಾರ ಬೆಳಗ್ಗೆ 11ಕ್ಕೆ ಬೈರತಿ ಬಸವರಾಜು ಹಾಜರಾದರು. ನಾಲ್ಕು ತಾಸು ಸುದೀರ್ಘವಾಗಿ ಶಾಸಕರನ್ನು ಪ್ರಶ್ನಿಸಿ ಕೇಳಿ ತನಿಖಾಧಿಕಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಳಿಕ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಮಧ್ಯಾಹ್ನ 3ಕ್ಕೆ ಶಾಸಕರನ್ನು ವಾಪಸ್ ಕಳುಹಿಸಿದ್ದಾರೆ.ಇನ್ನು ತನಗೂ ರೌಡಿ ಬಿಕ್ಲು ಶಿವ ಹತ್ಯೆಗೂ ಸಂಬಂಧವಿಲ್ಲ. ತಾನು ತಪ್ಪು ಮಾಡಿಲ್ಲ. ನನ್ನ ಮೇಲೆ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಮತ್ತೆ ಬೈರತಿ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ಜಗ್ಗನ ಜತೆ ಪೋಟೋ ತೋರಿಸಿ ಗ್ರಿಲ್
:ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಜತೆ ಸ್ನೇಹವು ಶಾಸಕ ಬೈರತಿ ಬಸವರಾಜು ಅವರಿಗೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.
ಮೊದಲ ಬಾರಿಗೆ ವಿಚಾರಣೆ ವೇಳೆ ತನಗೆ ಜಗ್ಗನ ಪರಿಚಯವಿಲ್ಲ ಎಂದು ಶಾಸಕರು ಸಮರ್ಥನೆ ನೀಡಿದ್ದರು. ಆದರೆ ಎರಡನೇ ಬಾರಿಯ ವಿಚಾರಣೆ ಸಂದರ್ಭದಲ್ಲಿ ಜಗ್ಗನ ಜತೆ ಶಾಸಕರ ಫೋಟೋಗಳನ್ನು ಮುಂದಿಟ್ಟು ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ.
ತಮಗೆ ಪರಿಚಯವಿಲ್ಲ ಅಂದ ಮೇಲೆ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಜಗ್ಗನ ಜತೆ ಹೋಗಿದ್ದೀರಿ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗನ ಜತೆ ಪ್ರಮುಖವಾಗಿ ಕಾಣಿಸಿಕೊಂಡಿರುವ ಫೋಟೋಗಳು ನಮ್ಮ ಬಳಿ ಇವೆ ಎಂದು ಶಾಸಕರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಶಾಸಕರ ಹಣೆಯಲ್ಲಿ ಬೆವರು ಹನಿಗಳು ಮೂಡಿವೆ ಎಂದು ಮೂಲಗಳು ಮಾಹಿತಿ ನೀಡಿವೆ.ಅಲ್ಲದೆ ಜಗ್ಗನ ಮನೆಯಲ್ಲಿ ಸಹ ಶಾಸಕರ ಜತೆ ಆತ್ಮೀಯ ಒಡನಾಟದ ಪೋಟೋಗಳು ಪತ್ತೆಯಾಗಿದ್ದವು. ಇವುಗಳನ್ನು ತೋರಿಸಿ ಸಹ ಶಾಸಕರಿಗೆ ತನಿಖಾಧಿಕಾರಿ ವಿವರಣೆ ಕೇಳಿದ್ದಾರೆ. ಆದರೆ ಯಾವುದಕ್ಕೂ ಸ್ಪಷ್ಟ ಉತ್ತರ ನೀಡದೆ ಅವರು ಜಾರಿಕೊಂಡಿದ್ದಾರೆ ಎನ್ನಲಾಗಿದೆ.
ಹಣಕಾಸು ಕುರಿತು ಮಾಹಿತಿ:
ಅಲ್ಲದೆ ಜಗ್ಗನ ಜತೆ ಬೈರತಿ ಬಸವರಾಜು ಅವರು ಹೊಂದಿದ್ದಾರೆ ಎನ್ನಲಾಗಿರುವ ಭೂ ಹಾಗೂ ಆರ್ಥಿಕ ವ್ಯವಹಾರ ಕುರಿತು ಸಹ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಕೆ.ಆರ್.ಪುರ ಹಾಗೂ ಮಹದೇವಪುರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಿಗೆ ಜಗ್ಗ ಬೇಲಿ ಹಾಕಿ ತೊಂದರೆ ಕೊಡುತ್ತಿದ್ದ. ಇದಕ್ಕೆ ರಾಜಕೀಯ ಶಕ್ತಿಯಾಗಿ ಬೈರತಿ ಬಸವರಾಜು ಅವರ ಹೆಸರನ್ನು ಆತ ಬಳಸಿಕೊಂಡಿರುವ ಆರೋಪಗಳಿವೆ. ಅಲ್ಲದೆ, ಜಗ್ಗನನ್ನು ಮುಂದಿಟ್ಟುಕೊಂಡು ಕೆಲ ಭೂಮಿ ಖರೀದಿ ಹಾಗೂ ಮಾರಾಟದಲ್ಲಿ ಅವರು ಪಾತ್ರವಹಿಸಿದ್ದರು. ಹೀಗಾಗಿ ಈ ವ್ಯವಹಾರ ಕುರಿತು ಸಹ ಶಾಸಕರಿಂದ ಪೊಲೀಸರು ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.