;Resize=(412,232))
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಂಗಸಂದ್ರದ ನಿವಾಸಿ ಕೆ.ಎ. ಮೂರ್ತಿ ಬಂಧಿತನಾಗಿದ್ದು, ಆರೋಪಿಯಿಂದ 16.75 ಲಕ್ಷ ರು. ಮೌಲ್ಯದ 245.33 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಬಿನ್ನಿಮಿಲ್ ರಸ್ತೆಯ ಅಂಗಳ ಪರಮೇಶ್ವರಿ ದೇವಾಲಯದಲ್ಲಿ ಭಕ್ತರೊಬ್ಬರಿಂದ ಚಿನ್ನದ ಸರ ಅಪಹರಣವಾಗಿತ್ತು. ಈ ಕೃತ್ಯದ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮೂರ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಶಿವಮೊಗ್ಗ ಜಿಲ್ಲೆಯ ಮೂರ್ತಿ ಬಿಸಿಎ ಓದಿದ್ದು, ಮೊದಲು ಸಾಫ್ಟ್‌ವೇರ್ ಕಂಪನಿಯಲ್ಲಿ ಆತ ಉದ್ಯೋಗದಲ್ಲಿದ್ದ. ಆದರೆ ವಿಪರೀತ ಕ್ರಿಕೆಟ್ ಬೆಟ್ಟಿಂಗ್ ವ್ಯಸನಕ್ಕೆ ಬಿದ್ದು ಮೂರ್ತಿ ಆರ್ಥಿಕ ಸಂಕಷ್ಟಕ್ಕೆ ತುತ್ತಾದ. ಈ ಹಣಕಾಸು ಸಮಸ್ಯೆ ಹಿನ್ನೆಲೆಯಲ್ಲಿ ಆತ ಅಡ್ಡದಾರಿ ತುಳಿದಿದ್ದ. ಅಂತೆಯೇ ನಗರದಲ್ಲಿ ಮನೆಗಳ್ಳತನ ಹಾಗೂ ಸರ ಅಪಹರಣ ಕೃತ್ಯಗಳಲ್ಲಿ ತೊಡಗಿದ್ದ.
ಈ ಪ್ರಕರಣಗಳಲ್ಲಿ ಮೂರ್ತಿಯನ್ನು ಕೋಡಿಗೇಹಳ್ಳಿ ಹಾಗೂ ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದು ಮತ್ತೆ ಆತ ತನ್ನ ಚಾಳಿ ಮುಂದುವರಿಸಿದ್ದ. ಈಗ ಬಿನ್ನಿಮಿಲ್ ಅಂಗಳ ಪರಮೇಶ್ವರಿ ದೇವಾಲಯದ ದೇವರ ದರ್ಶನಕ್ಕೆ ಸಾಲಿನಲ್ಲಿ ನಿಂತಿದ್ದ ಭಕ್ತರ ಚಿನ್ನದ ಸರ ಅಪಹರಿಸಿ ಮೂರ್ತಿ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.